ಜನವರಿ 1, 2012 ರಿಂದ ಜೂನ್ 30, 2012ರ ವರೆಗೆ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲಿ ಗೆದ್ದ ಮತ್ತು ಬಿದ್ದ ಚಿತ್ರಗಳಾವುವು ಎಂದೊಮ್ಮೆ ಹಿಂದಿರುಗಿ ನೋಡಿದಾಗ ಉತ್ತರ ನೂರರಲ್ಲಿ ನಲವತ್ತು ಅಂದರೆ ಜಸ್ಟ್ ಪಾಸ್.
ಆರಕ್ಕೇರದೆ ಮೂರಕ್ಕಿಳಿಯದಂತೆ ತನ್ನ ಸ್ಥಿತಿಗತಿಯನ್ನು ಕಾಪಾಡಿಕೊಂಡು ಬರುತ್ತಿರುವ ಕನ್ನಡ ಚಿತ್ರಗಳಿಗೆ ಮತ್ತೆ ಅದೇರಾಗ ಅದೇಹಾಡು ಎನ್ನುವಂತೆ ಚಿತ್ರಮಂದಿರಗಳ ಸಮಸ್ಯೆ, ಪರಭಾಷಾ ಚಿತ್ರಗಳ ಹಾವಳಿ, ಆಡಳಿತ ಪಕ್ಷ ಬಿಜೆಪಿಯಲ್ಲಿ ಇರುವಂತೆ ಚಿತ್ರರಂಗದೊಳಗಿನ ಭಿನ್ನಮತೀಯ ಚಟುವಟಿಕೆ, ಬಿಡುಗಡೆ ವಿವಾದ ಈ ರೀತಿ ಹತ್ತು ಹಲವಾರು ಸಮಸ್ಯೆಗಳ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಕನ್ನಡ ಚಿತ್ರಗಳ ಹಾಜರಾತಿಯನ್ನು ಭದ್ರವಾಗಿ ಸಾರುವಲ್ಲಿ ಮತ್ತೊಮ್ಮೆ ಮಗುದೊಮ್ಮೆ ವಿಫಲವಾಗಿದೆ.
ಕಳೆದ ಆರು ತಿಂಗಳಲ್ಲಿ ಬಿಡುಗಡೆಯಾದ ಒಟ್ಟು ಚಿತ್ರಗಳು 50. 'ಪ್ರಾರ್ಥನೆ' ಚಿತ್ರದ ಮೂಲಕ ಸುಧಾಮೂರ್ತಿ, 'ಶಿಕಾರಿ' ಚಿತ್ರದ ಮೂಲಕ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಸಂಪೂರ್ಣ 3D ತಂತ್ರಜ್ಞಾನದ 'ಕಠಾರಿವೀರ' ಚಿತ್ರ ಬಿಡುಗಡೆಯಾಗಿದ್ದು ಒಂದು ಹೈಲೈಟ್ಸ್ ಆದರೆ ಇನ್ನೊಂದಡೆ ಭೀಮಾತೀರದಲ್ಲಿ (ಬದಲಾದ ಶೀರ್ಷಿಕೆ ಚಂದಪ್ಪ), 'ದಂಡುಪಾಳ್ಯ' ಶೀರ್ಷಿಕೆ ವಿವಾದ, 'ಕಠಾರಿವೀರ ಸುರಸುಂದರಾಂಗಿ' ಬಿಡುಗಡೆ ವಿವಾದ ಇನ್ನೊಂದೆಡೆ.
1. ಜನವರಿ ತಿಂಗಳಲ್ಲಿ 7 ಚಿತ್ರಗಳು ಬಿಡುಗಡೆಗೊಂಡವು. ಅವು ಯಾವುದೆಂದರೆ ಮಾಲಾಶ್ರೀ ಅಭಿನಯದ ಶಕ್ತಿ, ಅನಂತನಾಗ್ ಅಭಿನಯದ ಪ್ರಾರ್ಥನೆ, ಥ್ರಿಲ್ಲರ್ ಮಂಜು ಮುಖ್ಯ ಭೂಮಿಕೆಯ ರಾಣಾ ಪ್ರತಾಪ್, ಯೋಗೀಶ್ ಮತ್ತು ರಮ್ಯಾ ಅಭಿನಯದ ಸಿದ್ಲಿಂಗು, ಶ್ರೀನಗರ ಕಿಟ್ಟಿ ಮತ್ತು ಪ್ರಿಯಾಮಣಿ ಅಭಿನಯದ ಕೋ ಕೋ, ರಾಜು ಪಾಟೀಲ್ ಅಭಿನಯದ ಸುನಾಮಿ ಮತ್ತು ಉಪೇಂದ್ರ ಅಭಿನಯದ ಆರಕ್ಷಕ.
2. ಫೆಬ್ರವರಿ ತಿಂಗಳಲ್ಲಿ 8 ಚಿತ್ರಗಳು ಬಿಡುಗಡೆಗೊಂಡವು. ದರ್ಶನ್ ಅಭಿನಯದ ಚಿಂಗಾರಿ, ದಿಗಂತ್ ಮತ್ತು ಐಂದ್ರಿತಾ ಅಭಿನಯದ ಪಾರಿಜಾತ, ಸಿದ್ದಾಂತ್ ಅಭಿನಯದ ಎಕೆ 56, ರಕ್ಷಿತ್ ಶೆಟ್ಟಿ ಅಭಿನಯದ ತುಗ್ಲಕ್, ರಮೇಶ್ ಅಭಿನಯದ ನಮ್ಮಣ್ಣ ಡಾನ್, ಸೂರಜ್ ಸಾಸನೂರ್ ಅಭಿನಯದ ಗವಿಪುರ, ಯಶ್ ಮತ್ತು ರಮ್ಯಾ ಅಭಿನಯದ ಲಕ್ಕಿ, ಅಭಯ್ ಪ್ರಮುಖ ಭೂಮಿಕೆಯಲ್ಲಿರುವ ಸನಿಹ.
3. ಮಾರ್ಚ್ ತಿಂಗಳಲ್ಲಿ 12 ಚಿತ್ರಗಳು ಬಿಡುಗಡೆಗೊಂಡವು. ಗಣೇಶ್ ಅಭಿನಯದ ಮುಂಜಾನೆ, ಗುರುರಾಜ್ ಜಗ್ಗೇಶ್ ಅಭಿನಯದ ಸಂಕ್ರಾಂತಿ, ದಿಲೀಪ್ ಪೈ ಅಭಿನಯದ ಪುನೀತ್, ಯೋಗೀಶ್ ಮತ್ತು ರಾಧಿಕಾ ಪಂಡಿತ ಅಭಿನಯದ ಅಲೆಮಾರಿ, ರವಿಶಂಕರ್ ಅಭಿನಯದ ಭಗವಂತ ಕೈ ಕೊಟ್ಟ, ದೀಪಕ್ ಅಭಿನಯದ ಮಾಗಡಿ, ರವಿಚಂದ್ರನ್ ಅಭಿನಯದ ನರಸಿಂಹ, ಅರ್ಜುನ್ ಸರ್ಜಾ ಅಭಿನಯದ ಪ್ರಸಾದ್, ಥ್ರಿಲ್ಲರ್ ಮಂಜು ಅಭಿನಯದ ಸೈಲೆನ್ಸ್, ಸಾಯಿ ಕುಮಾರ್ ಅಭಿನಯದ ಆ ಮರ್ಮ, ಕೋಮಲ್ ಅಭಿನಯದ ಗೋವಿಂದಾಯ ನಮಃ, ಮಮ್ಮುಟ್ಟಿ ಅಭಿನಯದ ಶಿಕಾರಿ.
4. ಏಪ್ರಿಲ್ ತಿಂಗಳಲ್ಲಿ 6 ಚಿತ್ರಗಳು ಬಿಡುಗಡೆಗೊಂಡವು. ದುನಿಯಾ ವಿಜಯ್ ಹಾಗೂ ಪ್ರಣೀತಾ ಅಭಿನಯದ ಭೀಮಾ ತೀರದಲ್ಲಿ, ದಿಗಂತ್ ಅಭಿನಯದ ದೇವ್ ಸನ್ ಆಫ್ ಮುದ್ದೇಗೌಡ, ಆಯೇಶಾ ಅಭಿನಯದ ಲೇಡಿ ಬಾಸ್, ರವಿಚಂದ್ರನ್ ಅಭಿನಯದ ದಶಮುಖ, ಯಶಸ್ ಅಭಿನಯದ ತೂಫಾನ್, ರಾಕೇಶ್ ಅಡಿಗ ಅಭಿನಯದ ಪರಿ.
5. ಮೇ ತಿಂಗಳಲ್ಲಿ ಮತ್ತೆ 6 ಚಿತ್ರಗಳು ಬಿಡುಗಡೆಗೊಂಡವು. ಪುನೀತ್ ರಾಜಕುಮಾರ್, ನಿಧಿ ಸುಬ್ಬಯ್ಯ ಹಾಗೂ ಪ್ರಿಯಾಮಣಿ ಅಭಿನಯದ ಅಣ್ಣಾಬಾಂಡ್, ಉಪೇಂದ್ರ, ಅಂಬರೀಶ್, ರಮ್ಯಾ ಅಭಿನಯದ ಕಠಾರಿವೀರ ಸುರಸುಂದರಾಂಗಿ, ಅಜಯ್ ರಾವ್, ರಾಧಿಕಾ ಪಂಡಿತ್ ಅಭಿನಯದ ಬ್ರೇಕಿಂಗ್ ನ್ಯೂಸ್, ಶ್ರೀನಗರ ಕಿಟ್ಟಿ ಅಭಿನಯದ ಕಿಲಾಡಿ ಕಿಟ್ಟಿ, ಸಿ ಆರ್ ಸಿಂಹ, ಉಮಾಶ್ರೀ ಅಭಿನಯದ ಗಾಂಧೀ ಸ್ಮೈಲ್ಸ್, ಆದಿತ್ಯ ಮತ್ತು ರಾಗಿಣಿ ದ್ವಿವೇದಿ ಅಭಿನಯದ ವಿಲನ್.
6. ಜೂನ್ ತಿಂಗಳಲ್ಲಿ ದಾಖಲೆಯ 11 ಚಿತ್ರಗಳು ಬಿಡುಗಡೆಗೊಂಡವು. ಯಶ್ ಅಭಿನಯದ ಜಾನೂ, ರವಿಚಂದ್ರನ್ ಅಭಿನಯದ ಕ್ರೇಜಿ ಲೋಕ, ತಾರಾ ಮತ್ತು ಭಾವನಾ ಅಭಿನಯದ ಭಾಗೀರಥಿ; ಪಂಕಜ್, ಅಂಬರೀಶ್ ಅಭಿನಯದ ರಣ,ರಾಹುಲ್ ಅಭಿನಯದ ದೇವನಹಳ್ಳಿ, ಧ್ರುವ ಮತ್ತು ರಾಧಿಕಾ ಪಂಡಿತ್ ಅಭಿನಯದ ಅದ್ದೂರಿ, ಭರತ್ ಅಭಿನಯದ ಇಂದಿನ ಸತ್ಯ, ನವೀನ ಕೃಷ್ಣ ಅಭಿನಯದ ಪೇಪರ್ ದೋಣಿ, ಮಧು ಶಾಲಿನಿ ನಟಿಸಿದ ನಾಗವಲ್ಲಿ, ರಘು ಮುಖರ್ಜಿ, ಪೂಜಾ ಗಾಂಧೀ ಅಭಿನಯದ ದಂಡುಪಾಳ್ಯ, ಕೃಷ್ಣ ಸುಪ್ರಿಯಾ ನಟಿಸಿದ ಹೇ ಕೃಷ್ಣ.
ಮೇಲೆ ಬಿಡುಗಡೆಗೊಂಡ ಬಹಳಷ್ಟು ಚಿತ್ರಗಳು ಹೋದ ಪುಟ್ಟ, ಬಂದ ಪುಟ್ಟ ಎನ್ನುವ ಹಾಗೆ ಬಂದಷ್ಟೇ ವೇಗದಲ್ಲಿ ಚಿತ್ರಮಂದಿರದಿಂದ ಕಾಲ್ಕಿತ್ತವು. ದೊಡ್ಡ ಬಜೆಟ್ ಚಿತ್ರಗಳಾದ ಶಕ್ತಿ, ನಮ್ಮಣ್ಣ ಡಾನ್, ಮುಂಜಾನೆ, ಅಲೆಮಾರಿ, ನರಸಿಂಹ, ಪ್ರಸಾದ್, ಶಿಕಾರಿ, ದಶಮುಖ, ಬ್ರೇಕಿಂಗ್ ನ್ಯೂಸ್, ಕಿಲಾಡಿ ಕಿಟ್ಟಿ, ವಿಲನ್, ಕ್ರೇಜಿಲೋಕ ಮುಂತಾದ ಚಿತ್ರಗಳು ಫ್ಲಾಪ್ ಪಟ್ಟಿಯ ಚಿತ್ರಗಳ ಸಾಲಿಗೆ ಸೇರಿತು.
ಕ್ರೇಜಿ ಸ್ಟಾರ್
ರವಿಚಂದ್ರನ್ ಅವರ ಮೂರೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಪಾರಿಜಾತ, ಜಾನೂ ಚಿತ್ರಗಳು ಹಾಡಿನ ಮೂಲಕ ತಕ್ಕ ಮಟ್ಟಿಗೆ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಳೆದ ಆರು ತಿಂಗಳ ಅವಧಿಯಲ್ಲಿನ ಎವರೇಜ್ ಹಿಟ್ ಚಿತ್ರಗಳು
1. ಸಿದ್ಲಿಂಗು
2. ಕೋ ಕೋ
3. ಆರಕ್ಷಕ
4. ಎಕೆ 56
5. ಪಾರಿಜಾತ
6. ಜಾನೂ
ಕಳೆದ ಆರು ತಿಂಗಳ ಅವಧಿಯ ಹಿಟ್ ಚಿತ್ರಗಳು
1. ಚಿಂಗಾರಿ
2. ಗೋವಿಂದಾಯ ನಮಃ
3. ಭೀಮಾ ತೀರದಲ್ಲಿ
4. ಅಣ್ಣಾಬಾಂಡ್
5. ಕಠಾರಿವೀರ ಸುರಸುಂದರಾಂಗಿ
6. ಅದ್ದೂರಿ
ಬಹಳಷ್ಟು ಚಿತ್ರಗಳು ಸೋತಿದ್ದರೂ ತುಸು ಸಂತೋಷ ಪಡಬೇಕಾದ ಅಂಶವೇನಂದರೆ ಕಳೆದ ಬಾರಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಗಲ್ಲಾಪೆಟ್ಟಿಗೆಯಲ್ಲಿ ಸುಧಾರಣೆ ಕಂಡುಬಂದಿದ್ದು. ವಾಣಿಜ್ಯ ಮೂಲಗಳ ಪ್ರಕಾರ, ಈ ಆರು ತಿಂಗಳಲ್ಲಿ 50 ಚಿತ್ರಗಳ ಮೇಲೆ ಒಟ್ಟು ರು.125 ಕೋಟಿ ಬಂಡವಾಳ ಹೂಡಲಾಗಿದೆ.
ರು.4 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ
ಅಣ್ಣಾಬಾಂಡ್ ಚಿತ್ರ ರು.4.5 ಕೋಟಿ ಲಾಭ ಮಾಡಿದೆ. ಈ ಚಿತ್ರದ ಟಿವಿ ರೈಟ್ಸ್ ರು.3.5 ಕೋಟಿಗೆ ಮಾರಾಟವಾಗಿತ್ತು.
ದರ್ಶನ್ ಅಭಿನಯದ ಚಿಂಗಾರಿ ಚಿತ್ರಕ್ಕೆ ರು.7 ಕೋಟಿ ಬಂಡವಾಳ ಹೂಡಲಾಗಿತ್ತು. ಚಿತ್ರ ಮೊದಲ ವಾರದಲ್ಲೇ 7 ಕೋಟಿಗೂ ಅಧಿಕ ವಹಿವಾಟು ನಡೆಸಿತ್ತು.
ಉಪೇಂದ್ರ ಅಭಿನಯದ 3D ಕಠಾರಿವೀರ ಸುರಸುಂದರಾಂಗಿ ಚಿತ್ರದ ಮೇಲೆ ನಿರ್ಮಾಪಕ ಮುನಿರತ್ನ 12 ಕೋಟಿ ರೂಪಾಯಿ ಸುರಿದಿದ್ದರು. ಚಿತ್ರ ಮೊದಲವಾರದಲ್ಲಿ ಭರ್ಜರಿ ಯಶಸ್ಸು ಕಂಡು ಅಂದಾಜು 7 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು. ಸ್ಯಾಟಲೈಟ್ ರೈಟ್ಸ್ ನಿಂದಲೇ ಚಿತ್ರಕ್ಕೆ ಮೂರುವರೆ ಕೋಟಿ ರೂಪಾಯಿ ಬಂದಿತ್ತು.
ಕಡಿಮೆ ಬಜೆಟ್ ನಲ್ಲಿ ನಿರ್ಮಿಸಿ ಎರಡು ಪಟ್ಟು ಲಾಭ ಮಾಡಿದ ಖ್ಯಾತಿ ಗೋವಿಂದಾಯ ನಮಃ ಚಿತ್ರಕ್ಕೆ ಸಲ್ಲುತ್ತದೆ. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಪವನ್ ಒಡೆಯರ್ ಗೆಲುವಿನ ನಗೆ ಬೀರಿದರು. ರು.1.5 ಕೋಟಿಯಲ್ಲಿ ನಿರ್ಮಿಸಿದ ಚಿತ್ರ ರು.5 ಕೋಟಿ ಬಾಚಿದೆ ಎಂದರೆ ನೀವೇ ಊಹಿಸಿ.