Monday, November 25, 2013

ತೆಲುಗಿನಲ್ಲೂ ಟೋಪಿ ಹಾಕಿದ ರಿಯಲ್ ಸ್ಟಾರ್ ಉಪ್ಪಿ

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ತೆಲುಗು ಚಿತ್ರರಂಗದ ಕಡೆಗೆ ಮುಖ ಮಾಡಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದರೂ ತೆಲುಗು ಚಿತ್ರವೇ ಎಂದು ಹುಬ್ಬೇರಿಸಬೇಡಿ. ಕನ್ನಡದಲ್ಲಿ ಭರ್ಜರಿ ಯಶಸ್ಸು ಗಳಿಸಿದ 'ಟೋಪಿವಾಲ' ಚಿತ್ರ ತೆಲುಗಿಗೆ ಡಬ್ ಆಗುತ್ತಿದೆ.

ರಾಜಕೀಯ ವಿಡಂಬನಾತ್ಮಕ ಈ ಚಿತ್ರಕ್ಕೆ ತೆಲುಗಿನಲ್ಲಿ 'ಸ್ವಿಸ್ ಬ್ಯಾಂಕುಕಿ ದಾರೇದಿ' (ಸ್ವಿಸ್ ಬ್ಯಾಂಕಿಗೆ ದಾರಿ ಯಾವುದು) ಎಂದು ಹೆಸರಿಡಲಾಗಿದೆ. ಗುಂಟೂರಿನ ರಿಯಲ್ ಎಸ್ಟೇಟ್ ಉದ್ಯಮಿ ಅವುಲೂರಿ ರಮೇಶ್ ಬಾಬು ಇದೇ ಮೊದಲ ಬಾರಿ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದು ತೆಲುಗಿಗೆ ತರುತ್ತಿದ್ದಾರೆ.

ಚಿತ್ರದಲ್ಲಿ ರವಿಶಂಕರ್ ಪ್ರಮುಖ ಪಾತ್ರ ಪೋಷಿಸಿರುವುದು ಜೊತೆಗೆ ಮಲ್ಲು ಬೆಡಗಿ ಭಾವನಾ ಇರುವುದು ತೆಲುಗು ಪ್ರೇಕ್ಷಕರಿಗೆ ಇದೇನು ಹೊಸಬರ ಚಿತ್ರ ಅನ್ನಿಸುವುದಿಲ್ಲ. ತೆಲುಗು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರದಲ್ಲಿ ಅಲ್ಲಲ್ಲಿ ಕೆಲವೊಂದು ಸನ್ನಿವೇಶಗಳನ್ನು ಮರುಚಿತ್ರಿಸಿಕೊಳ್ಳಲಾಗಿದೆ.

'ಟೋಪಿವಾಲ' ಚಿತ್ರಕ್ಕೆ ಶ್ರೀನಿ ಆಕ್ಷನ್ ಕಟ್ ಹೇಳಿದ್ದರು. ತೆಲುಗಿನಲ್ಲಿ ಎಂಜಿ ಶ್ರೀನಿವಾಸ್ ಎಂಬುವವರು ನಿರ್ದೇಶಿಸಿದ್ದು ಸ್ವತಃ ಉಪೇಂದ್ರ ಅವರೇ ಕಥೆ, ಚಿತ್ರಕಥೆಯನ್ನು ರಚಿಸಿದ್ದಾರೆ. ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. [ಟೋಪಿವಾಲ ಚಿತ್ರವಿಮರ್ಶೆ]

ರಾಜಕಾರಣಿಗಳು ಕೊಳ್ಳೆ ಹೊಡೆದ ದುಡ್ಡು ಸ್ವಿಸ್ ಬ್ಯಾಂಕ್ ಸೇರಿದ ಕಥೆ ಇದು. ಅದನ್ನು ಸ್ವದೇಶಕ್ಕೆ 'ಬಸಕ್' (ಉಪೇಂದ್ರ) ಹೇಗೆ ತರುತ್ತಾನೆ ಎಂಬುದೇ ಉಳಿದ ಕಥೆ. ಚಿತ್ರದ ಡಬ್ಬಿಂಗ್ ಕೆಲಸ ಮುಗಿದಿದ್ದು ಶೀಘ್ರದಲ್ಲೇ ಆಡಿಯೋ ಬಿಡುಗಡೆ ನಡೆಯಲಿದೆ.ಹೇಮಚಂದ್ರ, ವೇಣು, ಗೀತಾ ಮಾಧುರಿ, ಶ್ರೀಕರ್, ಸಾಹಿತಿ ಹಾಗೂ ಶ್ರೀಸೌಮ್ಯಾ ಅವರು ಚಿತ್ರಕ್ಕೆ ಡಬ್ಬಿಂಗ್ ಹೇಳಿರುವ ಕಲಾವಿದರು. ಸರಿಸುಮಾರು ರು.6.5 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ 'ಟೋಪಿವಾಲ' ಚಿತ್ರ ಬಾಕ್ಸ್ ಆಫೀಸಲ್ಲಿ ಹತ್ತಿರಹತ್ತಿರ ರು.10 ಕೋಟಿ ಕಲೆಕ್ಷನ್ ಮಾಡಿದೆ.


No comments:

Post a Comment