ಹೀಗ್ಯಾಕೆ ಕರೆದುಕೊಂಡಿದ್ದಾರೆ? ಉಪೇಂದ್ರ ರಿಯಲ್ ಸ್ಟಾರ್ ಅಲ್ಲ ಎಂದು ಯಾರಾದ್ರೂ ಹೇಳಿದ್ರೇ? ಅವರಿಗಿರುವ 'ಬಿರುದು' ಯಾರಿಗಾದರೂ ಅಪಥ್ಯವಾಯಿತೇ? ಅಥವಾ ತನ್ನ ಸ್ಟಾರ್‌ಗಿರಿ ಏನೂ ಅಲ್ಲ ಎಂಬ ಅನುಭವ ಏನಾದರೂ ಆಗಿದೆಯೇ? ಇಂತಹ ಪ್ರಶ್ನೆಗಳು ಉಪ್ಪಿಗೂ ಹುಟ್ಟಿಕೊಂಡಿರಬೇಕು. ಅದೇ ಕಾರಣದಿಂದ ಅವರು ಹೀಗೆಂದು ಹೇಳಿದ್ದಾರೆ: I think not only film is reel, life is also reel not real. Reel star upendra.
ಸಿನಿಮಾ ಮಾತ್ರ ರೀಲ್ ಅಲ್ಲ, ಜೀವನ ಕೂಡ ರೀಲ್ ಎಂಬ ಅನುಭವ ಸ್ವತಃ ಆಗಿರುವಂತಿದೆ ಉಪ್ಪಿ ಮಾತು. ಅದೇ ಕಾರಣದಿಂದ ತನ್ನನ್ನು ತಾನು ಅವರು ರೀಲ್ ಸ್ಟಾರ್ ಎಂದು ಕರೆದುಕೊಂಡಿದ್ದಾರೆ. ಬಹುಶಃ ಇದಕ್ಕೆಲ್ಲ ಕಾರಣ, ಇತ್ತೀಚಿನ 'ಕಠಾರಿ ವೀರ ಸುರಸುಂದರಾಂಗಿ' ವಿವಾದ!
ಹಿಂದೂ ದೇವತೆಗಳನ್ನು ಹೀಗಳೆದರು ಎಂಬ ಹಿನ್ನೆಲೆಯಲ್ಲಿ ಅವರಿಗೆ ಸಕಲೇಶಪುರದಂತಹ ಸಣ್ಣ ಪಟ್ಟಣದಲ್ಲೂ ಮುತ್ತಿಗೆ ಹಾಕಲಾಗಿತ್ತು. ರೀಲ್‌ನಲ್ಲಿ ಭಾರೀ ದೊಡ್ಡ ಸ್ಟಾರ್ ಆಗಿರುವ ಉಪ್ಪಿಗೆ ರಿಯಲ್ ಜೀವನದಲ್ಲಿ ಕೆಲವೇ ಕೆಲವು ಮಂದಿ ದಿಗ್ಬಂಧನ ವಿಧಿಸಿದ್ದರು. ಪ್ರತ್ಯಕ್ಷವೋ, ಪರೋಕ್ಷವೋ ಅಲ್ಲಿ ಉಪೇಂದ್ರ ಕ್ಷಮೆ ಕೇಳಬೇಕಾಯಿತು!
ತಾನು ದೊಡ್ಡ ಸ್ಟಾರ್ ಎನ್ನುವುದು ಒಂದು ಸರ್ಕಲ್‌ನಲ್ಲಿ ಮಾತ್ರ. ಆ ಸರ್ಕಲ್ ದಾಟಿದರೆ ತಾನು ಶೂನ್ಯ ಎಂಬ ಅನುಭವ. ರೀಲ್‌ನಲ್ಲಾದರೂ ಹೀರೋ ಎಂದು ಆಗಿರುವುದು ನಿಜ ಎಂದು ಭಾವಿಸಿದ್ದೆ, ರೀಲ್ ಕೂಡ ರಿಯಲ್ ಅಲ್ಲ ಎಂಬರ್ಥದಲ್ಲೀಗ ಉಪ್ಪಿ ಹೇಳಿಕೆ ನೀಡಿದ್ದಾರೆ.
ಅವರಿಗೆ ಶಾರೂಖ್ ಖಾನ್ ನೆನಪಿಗೆ ಬಂದಿರಬೇಕು. ನನಗೆ ಅಹಂಕಾರ ಜೋರಾಗಿದೆ ಎಂದಾಗಲೆಲ್ಲ ನಾನು ಅಮೆರಿಕಾ ಪ್ರವಾಸ ಮಾಡುತ್ತೇನೆ ಎಂದು ಅವರು ಇತ್ತೀಚೆಗಷ್ಟೇ ಹೇಳಿದ್ದರು. ಕಾರಣ, ಭಾರತದಲ್ಲಿ ಅವರು ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಅಮೆರಿಕಾಕ್ಕೆ ಹೋದಾಗ ಬಿಗ್ ಝೀರೋ. ಒಬ್ಬ ಮಾಮೂಲಿ ಮನುಷ್ಯನಂತೆ, ಅದಕ್ಕಿಂತಲೂ ಕೀಳಾಗಿ ಅಲ್ಲಿ ನೋಡುತ್ತಾರೆ.
No comments:
Post a Comment