ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಈಗ ಆರ್ ಚಂದ್ರು ನಿರ್ದೇಶನದ 'ಬ್ರಹ್ಮ'
ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ
ಚಿತ್ರವಿದು. ಇತ್ತೀಚೆಗೆ ಅವರನ್ನು ಮೈಸೂರು ಪ್ರೆಸ್ ಕ್ಲಬ್ ನ ಏಳನೇ
ವಾರ್ಷಿಕೋತ್ಸವದಲ್ಲಿ ಸನ್ಮಾನಿಸಲಾಯಿತು.
ಡಿಸೆಂಬರ್ 22ರಂದು ಭಾನುವಾರ ಸಂಜೆ 5.30ಕ್ಕೆ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿರುವ
ಬಿ.ವಿ. ಕಾರಂತ ಮಂಟಪದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಚಿತ್ರನಟ, ನಿರ್ದೇಶಕ
ರಿಯಲ್ ಸ್ಟಾರ್ ಉಪೇಂದ್ರರವರಿಗೆ ಮೈಸೂರು ಪ್ರೆಸ್ ಕ್ಲಬ್ ಫಿಲ್ಮಿ ಅವಾರ್ಡ್ 'ಸ್ಯಾಂಡಲ್
ವುಡ್ ಬ್ರಹ್ಮ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು ಪೇಟ ಹಾಕಿ, ಶಾಲು ಹೊದಿಸಿ, ಹಾರ, ಫಲತಾಂಬೂಗಳೊಂದಿಗೆ ಪ್ರಶಸ್ತಿ
ಫಲಕವನ್ನು ನೀಡಿ ನೆರೆದ ಅಭಿಮಾನಿಗಳ ಹಾಗೂ ಪ್ರೆಸ್ ಕ್ಲಬ್ ನ ಪತ್ರಕರ್ತರುಗಳ
ಸಮ್ಮುಖದಲ್ಲಿ ಪೂಜ್ಯ ಡಾ. ಭಾಷ್ಯಂ ಸ್ವಾಮೀಜಿ, ಉದ್ಯಮಿ ಎಂ. ಸಂಜೀವ ಶೆಟ್ಟಿ, ಪ್ರೆಸ್
ಕ್ಲಬ್ ಅಧ್ಯಕ್ಷರಾದ ಪಿ.ಎನ್. ಶ್ರೀನಾಥ್ ರವರು ಉಪೇಂದ್ರರವರಿಗೆ ಪ್ರಶಸ್ತಿ ಪ್ರದಾನ
ಮಾಡಿದರು. ನಂತರ ಉಪೇಂದ್ರರವರು ಮೈಸೂರು ಪ್ರೆಸ್ ಕ್ಲಬ್ ನ ನೂತನ ಕ್ಯಾಲೆಂಡರನ್ನು
ಬಿಡುಗಡೆ ಮಾಡಿದರು.
ಪ್ರೆಸ್ ಕ್ಲಬ್ ನ ಶ್ರೀನಾಥ್ ಅವರು ಮಾತನಾಡುತ್ತಾ, "ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ
ಕನ್ನಡ ಚಲನಚಿತ್ರಕ್ಕೆ ಎಂಬತ್ತರ ದಶಕದಲ್ಲಿ ಹೊಸ ತಿರುವನ್ನು ಕೊಟ್ಟವರು ಉಪೇಂದ್ರರವರು.
ಕನ್ನಡ ಚಲನಚಿತ್ರರಂಗದಲ್ಲಿ ಚಿತ್ರ ಬ್ರಹ್ಮ, ನಾದ ಬ್ರಹ್ಮಗಳಿದ್ದಾರೆ. ಈಗ ನಮ್ಮ ಕನ್ನಡ
ಚಲನಚಿತ್ರದ ಹೆಮ್ಮೆಯ ಬ್ರಹ್ಮ 'ಸ್ಯಾಂಡಲ್ ವುಡ್ ಬ್ರಹ್ಮ' ಉಪೇಂದ್ರರವರು ಎಂದು ಸಭೆಗೆ
ಘೋಷಿಸಿದರು.
ಭ್ರಷ್ಟಾಚಾರ ತುಂಬಿರುವ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮ 'ಸೂಪರ್' ಚಿತ್ರದಲ್ಲಿಯೇ
ಲೋಕಪಾಲ ಮಸೂದೆಯ ಬಗ್ಗೆ ಜನತೆಗೆ ಅರಿವು ಮೂಡಿಸಿದ್ದಾರೆ. ಅಲ್ಲದೇ ರಾಜಕೀಯದ
ಸೂಕ್ಷ್ಮತೆಗಳನ್ನು ತಿಳಿದುಕೊಂಡಿರುವ ಉಪೇಂದ್ರರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ
ಗೆದ್ದು ಬರಲಿ ಎಂದು ಶ್ರೀನಾಥ್ ಹಾರೈಸಿದರು.
ಸಮಾರಂಭದ ಆರಂಭದಲ್ಲಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‍ರವರಿಗೆ ಮೌನದಲ್ಲಿ
ಸಂತಾಪ ಸೂಚಿಸಲಾಯಿತು. ಪೂಜ್ಯ ಭಾಷ್ಯಂ ಸ್ವಾಮೀಜಿಯವರೊಂದಿಗೆ ಗಣ್ಯರು ಜ್ಯೋತಿ
ಬೆಳಗಿಸಿದರು. ಎಂ. ಸಂಜೀವ ಶೆಟ್ಟಿಯವರು ಮೈಸೂರು ಪ್ರೆಸ್ ಕ್ಲಬ್ ನ ಸಂಪೂರ್ಣ
ಮಾಹಿತಿಯನ್ನು ನೀಡಿದರು. 'ತಾತಯ್ಯ ಡ್ರೀಮ್ ಸಿಟಿ ನಿವೇಶನಕ್ಕಾಗಿ ಬುಕ್ಕಿಂಗ್' ಮಾಡಲು
ಪ್ರಥಮ ರಸೀದಿ ನೀಡುವ ಮೂಲಕ ಚಾಲನೆ ನೀಡಿದರು.
ಉಪೇಂದ್ರರವರು ಮೈಸೂರು ಪ್ರೆಸ್ ಕ್ಲಬ್ ನ ನೂತನ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಪೇಂದ್ರರವರು, "ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ
ಅದರಲ್ಲೂ ಶ್ರೀಗಂಧದ ನಾಡಿನಲ್ಲಿ ನನಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು
ಹೆಮ್ಮೆಯ ವಿಷಯವಾಗಿದೆ. ಅಭಿಮಾನಿ ಬ್ರಹ್ಮರುಗಳ ನಡುವೆ ಮಾಧ್ಯಮದವರು ನೀಡಿದ ಈ
ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನಿಜಕ್ಕೂ ನನಗೆ ತುಂಬಾ ಸಂತೋಷ ತಂದಿದೆ
ಎನ್ನುತ್ತಾ ಮನತುಂಬಿ ಧನ್ಯವಾದಗಳನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ಬುದ್ಧಿವಂತ, ರಕ್ತಕಣ್ಣೀರು ಚಲನಚಿತ್ರಗಳ
ಸಂಭಾಷಣೆಯನ್ನು ಹೇಳಿ ರಂಜಿಸಿದರು. ನಂತರ ತಮ್ಮ ಚಿತ್ರದ ಹಾಡನ್ನು ಹಾಡಿ, ಕುಣಿದು
ಕುಪ್ಪಳಿಸುತ್ತಾ ಅಭಿಮಾನಿಗಳ ಮನತಣಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಧ್ವನಿಗ್ರಹಣ
ತಂತ್ರಜ್ಞರಾದ ಪಳನಿ ಬಿ. ಸೇನಾಪತಿಯವರನ್ನು ಶಾಲು, ಹಾರ, ನೆನಪಿನ ಕಾಣಿಕೆಯನ್ನು ನೀಡುವ
ಮೂಲಕ ಸನ್ಮಾನಿಸಲಾಯಿತು.
ಪ್ರೆಸ್ ಕ್ಲಬ್ ನ ಅಧ್ಯಕ್ಷ ಪಿ.ಎನ್. ಶ್ರೀನಾಥ್ ಗಣ್ಯರನ್ನು ಸ್ವಾಗತಿಸಿದರು. ವೇದಿಕೆಯ
ಮೇಲೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಜಿಲ್ಲಾ ಸಭಾಪತಿ ಬಿ.ವಿ. ಶೇಷಾದ್ರಿ, ಹಿರಿಯ
ಸಮಾಜಸೇವಕರಾದ ಹೆಚ್.ಎಸ್. ನಂಜುಂಡಸ್ವಾಮಿ, ಮಹಾರಾಜ ಸಂಸ್ಕೃತ ಪಾಠಶಾಲೆಯ ಪ್ರೊ. ಎಸ್.ಎ.
ಕಮಲ ಜೈನ್, 'ಕಾಲ್ಗೆಜ್ಜೆ' ಚಿತ್ರದ ನಿರ್ದೇಶಕ ಬಂಗಾರು, ನಿರ್ಮಾಪಕ ಶಿವಕುಮಾರ್, ಮಿಸ್
ಕರ್ನಾಟಕ ಶಿಲ್ಪ, ಕನ್ನಡ ಸೇನಾ ಸಮಿತಿ ಅಧ್ಯಕ್ಷ ಬಿ. ನೀಲಕಂಠ ಮುಂತಾದವರು
ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಪುಷ್ಪ ಮೆಲೋಡಿಸ್ ರವರಿಂದ ರಸಮಂಜರಿ ಕಾರ್ಯಕ್ರಮ
ನಡೆಯಿತು.
No comments:
Post a Comment