Thursday, January 26, 2012

ಸೂಪರ್ ಸ್ಟಾರ್ ಉಪೇಂದ್ರ 'ಆರಕ್ಷಕ' ಚಿತ್ರವಿಮರ್ಶೆ



ಸೂಪರ್ ಸ್ಟಾರ್ ಉಪೇಂದ್ರ ಅಭಿನಯ, ಪಿ ವಾಸು ನಿರ್ದೆಶನದ ಚಿತ್ರ 'ಆರಕ್ಷಕ' ಇಂದು (ಜನವರಿ 26, 2012) ಬಿಡುಗಡೆಯಾಗಿ ರಾಜ್ಯದಾದ್ಯಂತ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಈ ಮೊದಲು 'ಆಪ್ತಮಿತ್ರ' ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದು 'ಆಪ್ತರಕ್ಷಕ' ಚಿತ್ರವನ್ನು ನಿರ್ಮಿಸಿದ್ದ ಕೃಷ್ಣಪ್ರಜ್ವಲ್ ಈ ಚಿತ್ರದ ನಿರ್ಮಾಪಕರು.

ಹಾಲಿವುಡ್ ನಲ್ಲಿ ಫೆಬ್ರವರಿ 19, 2010ರಲ್ಲಿ ಬಿಡುಗಡೆಯಾಗಿದ್ದ 'ಪ್ಯಾರಾಮೌಂಟ್ ಪಿಕ್ಚರ್ಸ್'ರವರ, 'ಟೈಟಾನಿಕ್' ಚಿತ್ರದ ಹೀರೋ 'ಲಿಯೋನಾರ್ಡೋ ಡಿ ಕಾಪ್ರಿಯೋ' ನಟನೆ ಹಾಗೂ 'ಮಾರ್ಟಿನ್ ಕೋರ್ಸಸ್' ನಿರ್ದೆಶನದ 'ಶಟ್ಟರ್ ಐಸ್ ಲ್ಯಾಂಡ್' ಚಿತ್ರದಿಂದ ಸ್ಪೂರ್ತಿ ಪಡೆದು ಆ ಚಿತ್ರದ 'ಕಥೆಯ ಎಳೆ'ಯನ್ನು ಎಳೆದು ಮಾಡಿರುವ ಕನ್ನಡ ಚಿತ್ರ ಉಪೇಂದ್ರರ 'ಆರಕ್ಷಕ'.

ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೆಶನ ಎಲ್ಲವನ್ನೂ ನಿರ್ವಹಿಸಿರುವ 'ಪಿ ವಾಸು' ಚಿತ್ರದ ಮೇಲೆ ಬಿಗಿ ಹಿಡಿತ ಸಾಧಿಸಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿದ್ದು ಪಿ ವಾಸು ಬದಲಿಗೆ 'ಉಪೇಂದ್ರ' ಎನ್ನುವಂತಿದೆ ನಿರೂಪಣೆ. ವಾಸು ನಿರ್ದೇಶನ ಈ ಚಿತ್ರ ಉಪೇಂದ್ರ ಅಭಿಮಾನಿಗಳಿಗೆ ನಿಜವಾಗ ಹಬ್ಬ. ಅದರ ಹೊರತಾಗಿಯೂ ಬರುವ ಪ್ರೇಕ್ಷಕರಿಗೂ ಮೋಡಿ ಮಾಡುವುದು ಖಂಡಿತ.

ಚಿತ್ರದ ಕಥೆಯನ್ನು ವಿಮರ್ಶೆಯಲ್ಲಿ ಪೂರ್ತಿ ಹೇಳದಿದ್ದರೇ ಚೆನ್ನ. ಆದರೆ, ಇದೊಂದು 'ಸೈಕಾಲಾಜಿಕಲ್ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಬೇಸ್ಡ್ ಚಿತ್ರ' ಎಂಬುದನ್ನು ಹೇಳಬಹುದು. ಈ ಮೂರನ್ನೂ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಚಿತ್ರಕಥೆಗೆ ಅಗತ್ಯವಿದ್ದಾಗ 'ಹಾಸ್ಯ'ವನ್ನೂ ಎಳೆದುತಂದು ಪ್ರೇಕ್ಷಕರು ಕಣ್ಣು-ಬಾಯಿ ಬಿಟ್ಟುಕೊಂಡು ನೋಡುವಂತೆ ಚಿತ್ರ ಮಾಡಿದ್ದಾರೆ ನಿರ್ದೇಶಕ ವಾಸು. ಕಲಾವಿದರ ಆಯ್ಕೆಯಲ್ಲೂ ಜಾಣತನ ಪ್ರದರ್ಶಿಸಿದ್ದಾರೆ.

ಇಡೀ ಚಿತ್ರ 'ರಿಯಲ್ ಸ್ಟಾರ್' ಉಪೇಂದ್ರಮಯ. ಮೂರು ವಿಭಿನ್ನ ನೆರಳಿನ ಪಾತ್ರಗಳಲ್ಲಿ ಅಭಿನಯಿಸಿರುವ ಸೂಪರ್ ಸ್ಟಾರ್ ಉಪೇಂದ್ರ, ಇಡೀ ಕಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು 'ಒನ್ ಅಂಡ್ ಓನ್ಲಿ' ಎನ್ನುವಂತೆ ಮಿಂಚಿದ್ದಾರೆ. ಡೈಲಾಗ್ ಹೇಳುವ ರೀತಿ, ಕಣ್ಣಿನಲ್ಲಿ ಅಗತ್ಯಕ್ಕೆ ತಕ್ಕ ಭಾವನೆ ಹಾಗೂ 'ಅತ್ಯದ್ಭುತ' ಎನಿಸುವ 'ಬಾಡಿ ಲಾಂಗ್ವೇಜ್' ಕೇವಲ ಉಪೇಂದ್ರರಿಗೆ ಮಾತ್ರ ಸಾಧ್ಯವೇನೋ ಎನ್ನುವಂತಿದೆ. ಉಪೇಂದ್ರ 'ಸೆಂಟಿಮೆಂಟ್' ನಟಿಸುವಾಗ ಪ್ರೇಕ್ಷಕರಿಗೂ ಕಣ್ಣೀರು ಬರುವುದು ಉಪ್ಪಿಯ ನಟನೆಗೆ ಸಿಗುವ ಬೋನಸ್.

ಉಪ್ಪಿಗೆ ಜೊತೆಯಾಗಿರುವ 'ಗ್ಲಾಮರ್ ರಾಣಿ' ರಾಗಿಣಿ ಹಾಗೂ ಕಣ್ಣೇ ಕಾದಂಬರಿ' ಎನ್ನುವಂತೆ ಅಭಿನಯಿಸಿ' ಮುದ್ದುಮುದ್ದಾಗಿ ಕಾಣುವ ಸದಾ ಇದ್ದಾರೆ. ಅವರಿಬ್ಬರಲ್ಲಿ ಅಭಿನಯದಲ್ಲಿ ನಟಿ ಸದಾ ಮಿಂಚಿದ್ದರೆ ರಾಗಿಣಿ 'ಮೈಮಾಟದ ಊಟ' ಬಡಿಸಿದ್ದಾರೆ. ಪಂಚಿಂಗ್ ಡೈಲಾಗ್ ಹಾಗೂ ಅದಕ್ಕೆ ತಕ್ಕ ಬಾಡಿ ಲಾಂಗ್ವೇಜ್ ಮೂಲಕ ಹಾಸ್ಯ ವಿಭಾಗವನ್ನು ಎಲ್ಲೂ ಬೋರಾಗದಂತೆ ನೋಡಿಕೊಂಡಿದ್ದಾರೆ ಶರಣ್.

ಉಳಿದಂತೆ ಪೋಷಕ ನಟರಲ್ಲಿ ಸೈಯಾಜಿ ಶಿಂದೆ ಹಾಗೂ ಮನೆತನ ರಾಜೇಶ್ ಪಾತ್ರ ಗಮನಸೆಳೆಯುತ್ತದೆ. ಸೈಯಾಜಿ ನಟನೆ ಪೌರಾಣಿಕ ನಾಟಕದ ಪಾತ್ರಧಾರಿಯನ್ನು ನೆನಪಿಸುವಂತೆ ಅಲ್ಲಲ್ಲಿ ನಾಟಕೀಯವಾಗಿದೆ. ರಾಜೇಶ್ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಚಿಕ್ಕ ಪಾತ್ರದಲ್ಲೂ ಪೆಟ್ರೋಲ್ ಪ್ರಸನ್ನ, ಆದಿ ಲೋಕೇಶ್ ಮಿಂಚಿದ್ದಾರೆ. ಉಳಿದ ಪಾತ್ರಧಾರಿಗಳದೂ ಕಥಗೆ ತಕ್ಕ ಅಭಿನಯ. ಚಿತ್ರದ ಲೊಕೇಶನ್ ಗಳೆಲ್ಲವೂ ಸೂಪರ್.

ಸಂಗೀತ ನಿರ್ದೇಶಕ ಗುರುಕಿರಣ್ ಆಪ್ತಮಿತ್ರ ಹಾಗೂ ಆಪ್ತರಕ್ಷಕ ನಂತರ ಸಂಗೀತ ಹಾಗೂ ಹಾಡುಗಳಲ್ಲಿ ಮತ್ತೊಮ್ಮೆ ಮಿಂಚಿದ್ದಾರೆ. "ಕಳ್ಳಿ ಕಳ್ಳಿ ಕಲ್ಲಾಕಿದೆ...., ತುಂಬಾ ಮೆಲೋಡಿಯಸ್ ಹಾಡು. "ಕುಚ್ ಕುಚ್ ಅಂತು ಏನೋ ಒಳಗೆ..., ಹಾಗೂ "ರಾತ್ರಿಯೆಲ್ಲಾ ನಿದ್ದೆ ಇಲ್ಲಾ..." ಹಾಡು ರಾತ್ರಿಯೆಲ್ಲಾ ನೆನಪಾಗಿ ಕಾಡಿ ನಿದ್ದೆ ನಿಜವಾಗಿಯೂ ಬಾರದಿರುದಂತಿದೆ. ಎಲ್ಲಾ ಹಾಡುಗಳ ಸಾಹಿತ್ಯ ಹಾಗೂ ಸಂಗೀತ ಸಖತ್ ಖುಷಿ ಕೊಡುತ್ತದೆ. ಥಿಯೇಟರ್ ಗೇಟ್ ದಾಟಿದ ಮೇಲೂ ಗುನುಗುವಂತೆ ಮಾಡಿರುವುದು ಗುರುಕಿರಣ್ ಹೆಚ್ಚುಗಾರಿಕೆ.

ಥೂ ನನ್ಮಕ್ಳಾ ಗಂಡಸ್ರಾ ನೀವ್ ಮೀಸೆ ಇದ್ದರೆ..... ಹಾಡು, ಪಡ್ಡೆಗಳಿಗೂ, ಅಲ್ಲದವರಿಗೂ ಪಾಠ ಹೇಳುವುದರ ಜೊತೆಗೆ ಸಖತ್ ಎಂಜಾಯ್ ಮಾಡುವಂತಿದೆ. ಆ ಹಾಡಿನಲ್ಲಿ ಉಪೇಂದ್ರ ಸ್ಟೆಪ್ಸ್ ಹಾಗು ಕೋರಿಯಾಗ್ರಫಿ ಅಕ್ಷರಶಃ ನೋಡುಗರು ಕೂತಲ್ಲೂ ಕುಣಿಯುವಂತೆ ಮಾಡುತ್ತದೆ. ಚಿತ್ರಮಂದಿರದ ತುಂಬಾ ಉಪೇಂದ್ರ ಫ್ಯಾನ್ ಗಳಿಂದ 'ಸಿಳ್ಳೆ ಚಪ್ಪಾಳೆ'ಗಳ ಸುರಿಮಳೆ ಆಗುವುದನ್ನು ಅಲ್ಲಿ ಹೋಗಿ ನೋಡುವುದು ನಿಜಕ್ಕೂ ಚೆಂದ.

ಪಿ ಕೆ ಎಚ್ ದಾಸ್ ಕ್ಯಾಮರಾ ಕೆಲಸ ಅಲ್ಲಲ್ಲಿ ಕೈಕೊಟ್ಟಿದೆ. ನೆರಳು ಬೆಳಕನ್ನು ತೋರಿಸುವಲ್ಲಿ ಇನ್ನೂ ಹೆಚ್ಚಿನ ಚಾಕಚಕ್ಯತೆಯ ಅಗತ್ಯ ಚಿತ್ರಕ್ಕಿತ್ತು. ಅದೇನೋ ಒಂದು ಕೊರತೆ ಎನ್ನುವಂತೆ ಚಿತ್ರವನ್ನು ಶ್ರೀಮಂತವಾಗಿ ಕಟ್ಟಿಕೊಡುವಲ್ಲಿ ಸೋತಿದೆ ಛಾಯಾಗ್ರಹಣ. ಆದರೂ ಒಟ್ಟಾರೆ ಚಿತ್ರದ ವೇಗ ಹಾಗೂ ನಿರೂಪಣೆಗೆ ಛಾಯಾಗ್ರಹಣದ ಕೊಡುಗೆ ಅಪಾರವಾಗಿಯೇ ಇದೆ. ಸುರೇಶ್ ಅರಸ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ಚೆನ್ನಾಗಿದೆ. ಒಟ್ಟಿನಲ್ಲಿ ಇಡೀ ಚಿತ್ರ ಬೆರಗು ಹುಟ್ಟಿಸುವಂತಿದೆ.

ಆಪ್ತರಕ್ಷಕದಲ್ಲಿ ಸಾಕಷ್ಟು ದುಡ್ಡುಮಾಡಿದ್ದ ನಿರ್ಮಾಪಕ ಕೃಷ್ಣಪ್ರಜ್ವಲ್ (ಕೆಕೆ), ಈ ಆರಕ್ಷಕ ಚಿತ್ರದ ಮೂಲಕ ಎರಡೂ ಕೈಯಲ್ಲಿ ದುಡ್ಡು ಬಾಚಿಕೊಂಡು "ಕೇಕೆ" ಹಾಕುವುದು ಗ್ಯಾರಂಟಿ ಎನ್ನುವಂತಿದೆ ಮೊದಲ ಶೋನಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ. ಮುಂದಿನ ಫಲಿತಾಂಶ ಪ್ರೇಕ್ಷಕರ ಕೈಯಲ್ಲಿದೆ. ಕನ್ನಡ ಸಿನಿಪ್ರೇಕ್ಷಕರಿಗೆ ಒಂದೊಳ್ಳೆಯ ಸಿನಿಮಾ ಕೊಟ್ಟಿದ್ದಾರೆ. ಅದು ಹಾಲಿವುಡ್ ಚಿತ್ರದ ಕಥೆಯ ಎಳೆ, ಸ್ಪೂರ್ತಿಯಾಗಿದ್ದರೂ ಎಲ್ಲರೂ ಹಾಲಿವುಡ್ ನ ಬಿಗ್ ಬಜೆಟ್ ಚಿತ್ರವನ್ನು ನೋಡಲು ಸಾಧ್ಯವಾಗುವುದಿಲ್ಲ. ಹಾಗಿದ್ದಾಗ ಅದನ್ನು ಕನ್ನಡಿಗರಿಗೆ ಕನ್ನಡದಲ್ಲಿ 'ಇಷ್ಟ'ವಾಗುವಂತೆ ಕಟ್ಟಿಕೊಟ್ಟಿರುವ ಚಿತ್ರತಂಡದ ಪ್ರಯತ್ನಕ್ಕೆ 'ಶಹಬ್ಬಾಸ್' ಎನ್ನಲೇಬೇಕು.

ನಿರ್ಮಾಪಕರು: ಕೃಷ್ಣಪ್ರಜ್ವಲ್
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೆಶನ: ಪಿ ವಾಸು
ತಾರಾಗಣ: ಉಪೇಂದ್ರ, ರಾಗಿಣಿ, ಸದಾ, ಸೈಯಾಜಿ ಶಿಂದೆ, ಮನೆತನ ರಾಜೇಶ್, ಶರಣ್, ಆದಿ ಲೋಕೇಶ್ ಮುಂತಾದವರು
ಸಂಗೀತ: ಗುರುಕಿರಣ್
ಛಾಯಾಗ್ರಹಣ: ಪಿ ಕೆ ಎಚ್ ದಾಸ್
ಸಂಕಲನ: ಸುರೇಶ್ ಅರಸ್
ಸಾಹಸ: ಡಿಫರೆಂಟ್ ಡ್ಯಾನಿ

No comments:

Post a Comment