Tuesday, September 20, 2011


ಉಪ್ಪಿ ಕಂಠಕಿಂತ ರುಚಿ ಬೇರೆ ಇಲ್ಲ.. ಒಪ್ಪಿಕೊಂಡೋರು ದಡ್ಡರಲ್ಲ..!!


ಉಪೇಂದ್ರ ಅಭಿನಯ-ನಿರ್ದೇಶನದ 'ಉಪೇಂದ್ರ' ಚಿತ್ರದಲ್ಲಿ 'ಉಪ್ಪಿಗಿಂತ ರುಚಿ ಬೇರೆ ಇಲ್ಲ ಒಪ್ಪಿಕೊಂಡೋರು ದಡ್ಡರಲ್ಲ' ಎಂಬ ಒಂದು ಗೀತೆಯಿದೆ. ಅದನ್ನೇ 'ಉಪ್ಪಿ ಕಂಠಕಿಂತ ರುಚಿ ಬೇರೆ ಇಲ್ಲ.. ಒಪ್ಪಿಕೊಂಡೋರು ದಡ್ಡರಲ್ಲ' ಎಂಬುದಾಗಿ ಕೊಂಚ ಬದಲಿಸಬೇಕಾಗುತ್ತೇನೋ ಅನಿಸುತ್ತಿದೆ.

ಏಕೆಂದರೆ ತಮ್ಮ ಪಾಡಿಗೆ ಅಭಿನಯವನ್ನೋ ನಿರ್ದೇಶನವನ್ನೋ ಮಾಡಿಕೊಂಡು ಆಗಾಗ ಒಂದೊಂದು ಹಾಡನ್ನು ಹಾಡಿಕೊಂಡಿದ್ದ ಉಪ್ಪಿಗೆ ಕಂಠದಾನದ ಅಥವಾ ಗಾಯನದ ಬೇಡಿಕೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇತ್ತೀಚೆಗೆ ತಮ್ಮ ಅಭಿನಯ ಮತ್ತು ನಿರ್ದೇಶನದ 'ಸೂಪರ್' ಚಿತ್ರಕ್ಕಾಗಿ ಅವರು 'ಸಿಕ್ಕಾಪಟ್ಟೇ ಇಷ್ಟಾಪಟ್ಟೇ...' ಎಂಬ ಹಾಡನ್ನು ಹಾಡಿದ್ದರು. ಅದು ಎಷ್ಟು ಸೂಪರ್‌ಹಿಟ್‌ ಆಯಿತು ಎಂಬುದು ನಿಮಗೆ ಗೊತ್ತಿರುವಂಥದ್ದೇ.

ಇದಾದ ನಂತರ 'ಜೋಗಯ್ಯ' ಚಿತ್ರಕ್ಕಾಗಿ ಉಪ್ಪಿ ಹಾಡಿದ 'ತಗ್ಲಾಕ್ಕೊಂಡೆ ತಗ್ಲಾಕ್ಕೊಂಡೆ' ಎಂಬ ಹಾಡು ಪಡ್ಡೆ ಹುಡುಗರನ್ನು ಅದೆಷ್ಟು ಹುಚ್ಚೆಬ್ಬಿಸಿದೆಯೆಂದರೆ, ಚಿತ್ರದಲ್ಲಿ ಕನಿಷ್ಟ ಪಕ್ಷ ಒಂದು ಹಾಡನ್ನಾದರೂ ಉಪ್ಪಿಯಿಂದ ಹಾಡಿಸಬೇಕು ಎಂಬ ಕ್ರೇಜ್‌ ಚಿತ್ರೋದ್ಯಮಿಗಳಲ್ಲಿ ಶುರುವಾಗಿದೆ. ಇದಕ್ಕೊಂದು ವಿಭಿನ್ನ ಆಯಾಮ ಬಂದಿದ್ದು ಕೋಮಲ್‌ ಕುಮಾರ್ ಅಭಿನಯದ 'ಮರ್ಯಾದೆ ರಾಮಣ್ಣ' ಚಿತ್ರದಲ್ಲಿ ಒಂದು ಪಾತ್ರದಂತೆಯೇ ಕಾಣಿಸಿಕೊಂಡಿರುವ ಒಂದು ಸೈಕಲ್‌ಗೆ ಉಪ್ಪಿ ಕಂಠದಾನ ಮಾಡಿದಾಗ. 

ಈಗ 'ಜರಾಸಂಧ' ಚಿತ್ರದ ಸರದಿ. ಶಶಾಂಕ್‌ ನಿರ್ದೇಶನ, ವಿಜಯ್‌-ಪ್ರಣೀತಾ ಅಭಿನಯದ ಈ ಚಿತ್ರಕ್ಕೆ 'ಪದೇ ಪದೇ ಫೋನಿನಲ್ಲಿ....' ಎಂಬ ಹಾಡನ್ನು ಉಪ್ಪಿ ಇತ್ತೀಚೆಗೆ ಹಾಡಿದ್ದು ವಿಶೇಷ. ಈ ಹಾಡನ್ನು ನಿರ್ದೇಶಕ ಶಶಾಂಕ್‌ರವರೇ ಬರೆದಿದ್ದಾರಂತೆ. 

ಒಟ್ಟಿನಲ್ಲಿ ತಾರೆಗಳೆಂದರೆ ಉತ್ತರ-ದಕ್ಷಿಣ ಎಂಬಂತೆ ಮುಖಮಾಡಿಕೊಂಡು ಕೂರುವ ಬದಲಿಗೆ ಪರಸ್ಪರರ ಚಿತ್ರಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಹೀಗೆ ತೊಡಗಿಸಿಕೊಳ್ಳುವುದು ಒಂದು ರೀತಿಯಲ್ಲಿ ಆರೋಗ್ಯಕರ ಲಕ್ಷಣವೇ ಎನ್ನಬೇಕು. 'ರಕ್ತಕಣ್ಣೀರು' ಚಿತ್ರದ 'ಐ ಲೈಕ್‌ ಇಟ್‌ ಕಾಂತಾ ಐ ಲೈಕ್‌ ಇಟ್‌' ಎಂಬ ತಮ್ಮ ಕಂಠಸಿರಿಯಿಂದಲೇ ಜನಮೆಚ್ಚುಗೆಯನ್ನು ಗಳಿಸಿದ ಉಪೇಂದ್ರ ಈಗ ತಮ್ಮ ಗಾಯನದಿಂದಲೂ ಮತ್ತಷ್ಟು ಜನರನ್ನು ಸೆಳೆಯುವಂತಾಗಲಿ ಎಂದು ಆಶಿಸೋಣ

No comments:

Post a Comment