Friday, May 17, 2013

ಉಪ್ಪಿ ಟಿಪಿಕಲ್ ಸಾಂಗ್

ಉಪೇಂದ್ರ ಅವರ ವೃತ್ತಿ ಜೀವನದಲ್ಲಿಯೇ ವಿಶೇಷ ಚಿತ್ರವೆಂದು ಭಾವಿಸಲಾಗುತ್ತಿರುವ ಬ್ರಹ್ಮ ಚಿತ್ರದ ಹಾಡುಗಳು ಸಂಗೀತ ಸಂಯೋಜನೆಗೆ ಒಳಗಾಗಿವೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಕವಿರಾಜ್, ಹೃದಯಶಿವ ಸಾಹಿತ್ಯ ಬರೆಯುತ್ತಾರಂತೆ.

ಚಿತ್ರಕ್ಕೆ ಸಂಗೀತ ಗುರುಕಿರಣ್ ಸಂಗೀತ ನೀಡುತ್ತಿದ್ದು, ಎಲ್ಲಾ ಹಾಡುಗಳು ಕಮರ್ಷಿಯಲ್ ರೀತಿಯಲ್ಲಿ ಇರುತ್ತವೆಯಂತೆ. ಸಂಗೀತ ನಿರ್ದೇಶಕರು ಉಪೇಂದ್ರ ಜತೆ ಕೆಲಸ ಮಾಡಿದ್ದಾರೆ, ನಿರ್ದೇಶಕ ಚಂದ್ರು ಜತೆಗೂ ಮೈಲಾರಿ, ಚಾರ್‌ಮಿನಾರ ಚಿತ್ರದಲ್ಲೂ ಜತೆಯಾಗಿದ್ದಾರೆ. ಹೀಗಾಗಿ ಬ್ರಹ್ಮ ಚಿತ್ರದ ಹಾಡುಗಳು ವಿಶೇಷವಾಗಿ ಮೂಡಿ ಬರಲಿವೆ ಅಂತಾರೆ.

ಚಿತ್ರದಲ್ಲಿ ಉಪೇಂದ್ರ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎರಡಕ್ಕೂ ಇಂಟ್ರಡಕ್ಷನ್ ಸಾಂಗ್ ಬಳಕೆ ಆಗುತ್ತವೆಯಂತೆ. ಒಂದು ಡ್ಯುಯೆಟ್, ಒಂದು ಮೆಲೊಡಿ, ಮತ್ತೊಂದು ಉಪೇಂದ್ರ ಅವರ ಪಕ್ಕಾ ಟಿಪಿಕಲ್ ಶೈಲಿಯಲ್ಲಿ ಇರಲಿದೆಯಂತೆ.

ನಾಯಕ ಉಪೇಂದ್ರ ಮತ್ತು ನಿರ್ದೇಶಕ ಚಂದ್ರು ಇಬ್ಬರೂ ಸಾಹಿತ್ಯ ಬಲ್ಲವರು. ಹಾಡುಗಳನ್ನೂ ಬರೆದಿದ್ದಾರೆ. ಹೀಗಾಗಿಯೇ ಸಾಹಿತ್ಯ ಮತ್ತು ಸಂಗೀತ ಎರಡಕ್ಕೂ ಜುಗಲ್ಬಂದಿ ನಡೆಯಲಿದೆಯಂತೆ. ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ಅರಮನೆಯ ಸೆಟ್ ಹಾಕಲಿದ್ದಾರಂತೆ. ಅಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಯಲಿದೆ.

ಮೈಲಾರಿ ಚಿತ್ರದಲ್ಲಿ ಹಾಡುಗಳು ಹಿಟ್ ಆಗಿದ್ದವು. ಈ ಬಾರಿಯೂ ಅದು ಮುಂದುವರೆಯಲಿದೆ ಅಂತಾರೆ ಗುರುಕಿರಣ್. ಮೊನ್ನೆ ತಾನೆ ಹಾಡುಗಳ ಸಂಯೋಜನೆಗೆ ಕೂತಿರುವ ಇವರು, ಎರಡು ತಿಂಗಳಲ್ಲಿ ಪ್ರೇಕ್ಷಕರಿಗೆ ಹಾಡು ಕೇಳಿಸುತ್ತಾರಂತೆ. ಕತೆಯಷ್ಟೇ ಹಾಡಿಗೂ ನಾನು ಪ್ರಾಮುಖ್ಯತೆ ಕೊಡುವೆ. ಹಾಡು ಮತ್ತು ಕತೆಯು ರಥದ ಎರಡು ಗಾಲಿಗಳಿದ್ದಂತೆ ಎರಡೂ ಸಮಗತಿಯಲ್ಲಿ ಸಾಗಿದರೆ, ಅದು ಯಶಸ್ಸಿನ ಪಯಣ. ಅಂತಹ ಪಯಣಕ್ಕೆ ಗುರುಕಿರಣ್ ಹಾಡುಗಳು ಸಾಥ್ ನೀಡುತ್ತವೆ ಅಂತಾರೆ ನಿರ್ದೇಶಕ ಚಂದ್ರು. ಎರಡು ಭಾಷೆಯಲ್ಲಿ ಇದು ಏಕಕಾಲಕ್ಕೆ ಚಿತ್ರೀಕರಣ ಆಗುವುದರಿಂದ ಪಕ್ಕಾ ಕಮರ್ಷಿಯಲ್ ಆಗಿ ಹಾಡುಗಳನ್ನು ಬಳಸಿಕೊಳ್ಳುತ್ತಿದ್ದೇನೆ. ಎರಡು ಭಾಷೆಯಲ್ಲೂ ಹಾಡುಗಳು ಹಿಟ್ ಆಗುತ್ತವೆ ಎಂಬ ನಂಬಿಕೆ ಇದೆ ಅಂತಾರೆ. ಹಾಡುಗಳ ಚಿತ್ರೀಕರಣಕ್ಕೆ ಈಗಾಗಲೇ ಪ್ಲ್ಯಾನ್ ಮಾಡಿರುವ ಚಿತ್ರತಂಡ, ಒಳ್ಳೊಳ್ಳೆ ಸ್ಥಳಗಳನ್ನು ನೋಡಿಕೊಂಡು ಬಂದಿದ್ದಾರಂತೆ. ಶೇಖರ್ ಚಂದ್ರ ಅವರ ಸಿನಿಮಾಟೋಗ್ರಫಿಯಲ್ಲಿ ಹಾಡುಗಳು ಮೂಡಿ ಬರಲಿದ್ದು, ಪಿ.ವಿ.ಮಂಜುನಾಥ್ ಬಾಬು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಬ್ರಹ್ಮ ರೂಪತಾಳಲಿದ್ದಾನೆ.
-----

ಚಿತ್ರದಲ್ಲಿ ಐದು ಹಾಡುಗಳು ಇರುತ್ತವೆ. ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಬಳಸಿಕೊಂಡು ಗುರುಕಿರಣ್ ಕಂಪೋಸ್ ಮಾಡುತ್ತಿದ್ದಾರೆ. ಉಪೇಂದ್ರ ಅವರು ಎರಡು ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ, ಎರಡು ಇಂಟ್ರಡಕ್ಷನ್ ಹಾಡು ಇರಲಿವೆ.
* ಆರ್.ಚಂದ್ರು, ನಿರ್ದೇಶಕರು

ಕನಕಪುರ ಶ್ರೀನಿವಾಸ್‌ ಮಗನ ನಿಶ್ಚಿತಾರ್ಥದಲ್ಲಿ ಭೇಟಿ ಆಗಿದ್ದರಂತೆ ಉಪೇಂದ್ರ ಮತ್ತು ನಿರ್ದೇಶಕ ಆರ್‌. ಚಂದ್ರು. ನೀವು ನಮ್ಗೆಲ್ಲಾ ಕಥೆ ಮಾಡಲ್ಲ ಎಂದರಂತೆ ಉಪೇಂದ್ರ. ನೀವು ಡೇಟ್‌ ಕೊಟ್ಟರೆ ಕಥೆ ಏನು, ಸಿನಿಮಾನೇ ಮಾಡ್ತೀನಿ ಅಂದ್ರಂತೆ ಆರ್‌. ಚಂದ್ರು. ಹೀಗೆ ಶುರುವಾದ 'ಬ್ರಹ್ಮ' ಈಗ ಚಿತ್ರೀಕರಣದ ಲೆವೆಲ್‌ಗೆ ಬಂದು ನಿಂತಿದೆ. ಈ ಮಧ್ಯೆ ಫೋಟೋ ಶೂಟ್‌ ಆಗಿದೆ, ಹಾಡುಗಳ ರೆಕಾರ್ಡಿಂಗ್‌ ಶುರುವಾಗಿದೆ ಇತ್ಯಾದಿ ಇತ್ಯಾದಿ ... ಚಂದ್ರು ಮಾತನಾಡಿದ್ದು ಅದೇ ಹಾಡುಗಳ ರೆಕಾರ್ಡಿಂಗ್‌ ಪತ್ರಿಕಾಗೋಷ್ಠಿಯಲ್ಲಿ. ಸ್ಥಳ ಗುರುಕಿರಣ್‌ರ ಚಂದ್ರ ಲೇಔಟ್‌ನ ಮನೆ.

ಇದುವರೆಗೂ ಚಂದ್ರು ಪ್ರಮಕಥೆಗಳನ್ನೇ ಹೆಚ್ಚು ನಿರ್ದೇಶಿಸಿದ್ದು. ಆದರೆ, 'ಬ್ರಹ್ಮ' ಒಂದು ಆ್ಯಕ್ಷನ್‌ ಚಿತ್ರ ಎನ್ನುತ್ತಾರೆ ಚಂದ್ರು. ಅಷ್ಟೇ ಅಲ್ಲ, ಪ್ರೀತಿ, ಕಾಮಿಡಿ, ಐತಿಹಾಸಿಕ ಎಲ್ಲವೂ ಇದೆಯಂತೆ. ಸಾಲದ್ದಕ್ಕೆ 16ನೇ ಶತಮಾನದಲ್ಲಿ ಶುರುವಾಗುವ ಕಥೆ, ಈ ಜಮಾನಗೆ ಬಂದು ನಿಲ್ಲುತದಂತೆ. ಚಂದ್ರು ಇಷ್ಟು ಹೇಳುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆಯಾಯಿತು. ಹಾಗಾದರೆ ಇದು 'ಮಗಧೀರ' ರೀಮೇಕಾ?

ಖಂಡಿತಾ ಇಲ್ಲ ಎನ್ನುತ್ತಾರೆ ಚಂದ್ರು. ಆ ಚಿತ್ರ ನೋಡಿ ಸ್ಫೂರ್ತಿಗೊಂಡಿದ್ದು ನಿಜವಂತೆ. ಆದರೆ, ಇದು ಅದಲ್ಲ ಎಂಬುದು ಚಂದ್ರು ಅಭಿಪ್ರಾಯ. 'ಇದು ಪುನರ್ಜನ್ಮದ ಕಥೆಯಲ್ಲ. ಒಂದು ವಂಶದ ಕಥೆ. ಇಲ್ಲಿ ನಾಯಕ ಒಬ್ಬ ಯೋಧನಾಗಿರುತ್ತಾನೆ. ಕಟ್‌ ಮಾಡಿದ್ರೆ ಈಗಿನ ಕಾಲದಲ್ಲಿ ಇನ್ನೊಂದು ಪ್ರಮುಖ ಪಾತ್ರವಿದೆ. ಚಿತ್ರದಲ್ಲಿ ಉಪೇಂದ್ರ ಎರಡು ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿಯ ಹುಡುಕಾಟ ನಡೆದಿದೆ. ತ್ರಿಷಾರನ್ನು ಕೇಳಿದೆವು. ಅವರು ಆಸಕ್ತಿ ತೋರಿಸಲಿಲ್ಲ. ನ್ನು ಸಯ್ನಾಜಿ ಶಿಂಧೆ, ನಾಜರ್‌ ಮುಂತಾದವರು ಅಭಿನಯಿಸುತ್ತಿದ್ದಾರೆ' ಎಂದು ಪಟ್ಟಿ ಕೊಟ್ಟರು ಚಂದ್ರು.

ಇಷ್ಟು ಹೇಳುತ್ತಿದ್ದಂತೆ, 'ಇನ್ನೊಂದು ವಿಷಯ ಮರೆತಿದ್ದೆ' ಎಂದು ನೆನಪಿಸಿಕೊಂಡು ಹೇಳಿದರು ಚಂದ್ರು. ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅವರು ನಿರ್ದೇಶಿಸುತ್ತಿದ್ದಾರೆ. ಅದೇ ಕಾರಣಕ್ಕೆ ಎರಡು ಭಾಷೆಗಳ ಕಲಾವಿದರು ಇರುತ್ತಾರೆ. ಇಷ್ಟು ಹೇಳುತ್ತಿದ್ದಂತೆ, ಪತ್ರಕರ್ತರಿಂದ ಬಂದ ಮೊದಲ ಪ್ರಶ್ನೆ ...

ಬಜೆಟ್‌ ಎಷ್ಟು?
ಚಂದ್ರ ನಕ್ಕರು. ಅದನ್ನೆಲ್ಲಾ ತಮ್ಮ ನಿರ್ಮಾಪಕರಿಗೆ ಬಿಟ್ಟು ಇರುವುದಾಗಿ ಹೇಳಿದರು. ನಿರ್ಮಾಪಕ ಮಂಜುನಾಥ ಬಾಬು, ಚಂದ್ರು ಹಳೆಯ ಸ್ನೇಹಿತರಂತೆ. 'ಚಾರ್‌ಮಿನಾರ್‌' ಚಿತ್ರದಿಂದ ನಿರ್ಮಾಪಕರು ಅರ್ಧಕ್ಕೆ ಹೋದಾಗ, ಇದೇ ಮಂಜುನಾಥ ಬಾಬು ಬಡ್ಡಿ ಇಲ್ಲದೆ ಸಾಲ ಕೊಟ್ಟರಂತೆ. ಈಗ ಈ ಚಿತ್ರವನ್ನು ನಿರ್ಮಿಸುವುದರ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಬಾಬು ಬಜೆಟ್‌ ಎಷ್ಟಾದರೂ ರೆಡಿ ಎಂದರು.
ಇನ್ನು ಗುರುಕಿರಣ್‌ಗೆ ಇಲ್ಲಿ ಹಾಡುಗಳಿಗಿಂಥ ಹಿನ್ನೆಲೆ ಸಂಗೀತ ಸವಾಲಿನ ಕೆಲಸವಂತೆ. ಎರಡೂ ಕಾಳಘಟ್ಟಕ್ಕೆ ತಕ್ಕ ಹಾಗೆ ಸಾಹಸ ಸಂಯೋಜಿಸುವುದು ಸವಾಲು ಎಂದರು ಥ್ರಿಲ್ಲರ್‌ ಮಂಜು. ಇನ್ನು ಅದನ್ನೆಲ್ಲ ಸಮರ್ಥವಾಗಿ ಸೆರೆಹಿಡಿಯಬೇಕು ಎಂಬುದು ಛಾಯಾಗ್ರಾಹಕ ಶೇಖರ್‌ ಚಂದ್ರುಗಿರುವ ಸವಾಲು. ಎಲ್ಲರದ್ದೂ ಆಯಿತು. ಮುಖ್ಯವಾಗಿ ಉಪೇಂದ್ರ ಎಲ್ಲಿ ಎಂದು ನೀವು ಕೇಳಬಹುದು? ಉಪೇಂದ್ರ ಅಷ್ಟರಲ್ಲಿ ಫ್ಯಾಮಿಲಿ ಸಮೇತರಾಗಿ ದುಬೈಗೆ ಹಾರಿದ್ದರು.

No comments:

Post a Comment