Thursday, May 24, 2012

ಠುಸ್ಸಾಯ್ತು ಗಲಾಟೆ; 'ಕಠಾರಿ ವೀರ'ನಿಗೆ ಭರ್ಜರಿ ಕಲೆಕ್ಷನ್

 
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಒಂದಷ್ಟು ಹಿಂದೂ ಸಂಘಟನೆಗಳು ಮತ್ತು ಸ್ವಾಮೀಜಿಗಳು 'ಕಠಾರಿ ವೀರ ಸುರಸುಂದರಾಂಗಿ' ಚಿತ್ರವನ್ನು ತೀವ್ರವಾಗಿ ವಿರೋಧಿಸಿದ್ದರು. ಕೆಲವು ಕಡೆ ದಾಂಧಲೆಗಳೂ ನಡೆದವು. ಸಂಧಾನವೂ ನಡೆಯಿತು. ಆಕ್ಷೇಪಾರ್ಹ ದೃಶ್ಯಗಳಿಗೆ ಇನ್ನೇನು ಕತ್ತರಿ ಹಾಕಬೇಕೆನ್ನುವಷ್ಟರಲ್ಲಿ ನಡೆಯಿತು ಸೂಪರ್ ಡ್ರಾಮಾ. ಈಗ ನಿರ್ಮಾಪಕ ಮುನಿರತ್ನ ನಿರಾಳ. ಕಟ್-ಗಿಟ್ ತಲೆಬಿಸಿಯಿಲ್ಲ, ಬರೀ ನೋಟಿನ ಕಟ್ಟನ್ನು ಎಣಿಸುವ ಕೆಲಸ ಮಾತ್ರ!

ಹೌದು, ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾದ ಕನ್ನಡದ ಮೊದಲ 3ಡಿ ಚಿತ್ರ 'ಕಠಾರಿ ವೀರ ಸುರಸುಂದರಾಂಗಿ'ಗೆ ಆರಂಭದಲ್ಲಿ ಅಷ್ಟೇನೂ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಕ್ಕಿರಲಿಲ್ಲ. ಆದರೆ ಈಗ ರಾಜ್ಯದಾದ್ಯಂತ ಉತ್ತಮ ಗಳಿಕೆಯಾಗುತ್ತಿದೆ. ಅದರಲ್ಲೂ 3ಡಿ ವ್ಯವಸ್ಥೆಯಿರುವ ಚಿತ್ರಮಂದಿರಗಳಲ್ಲಿ ಚಿತ್ರ ಚೆನ್ನಾಗಿಯೇ ಓಡುತ್ತಿದೆ. ಸಜಜವಾಗಿಯೇ ನಿರ್ಮಾಪಕ ಮುನಿರತ್ನ ಖುಷಿಯಾಗಿದ್ದಾರೆ.

ಬಾಕ್ಸಾಫೀಸ್ ವರದಿಗಳ ಪ್ರಕಾರ, ಕಠಾರಿ ಚಿತ್ರಕ್ಕೆ ಮುನಿರತ್ನ ಸುರಿದಿರುವ ಹಣ ಈಗಾಗಲೇ ವಾಪಸ್ಸಾಗಿದೆ. ಇನ್ನೇನಿದ್ದರೂ ಲಾಭ.

ಕತ್ತರಿ ಹಾಕೋದೇನಾಯ್ತು?
ಉಡುಪಿಯಲ್ಲಿ ನಡೆದ ಸಂಧಾನದ ಪ್ರಕಾರ, ಸಿನಿಮಾದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳು ಮತ್ತು ಸಂಭಾಷಣೆಗಳಿಗೆ ನಿರ್ಮಾಪಕರು ಕತ್ತರಿ ಹಾಕಬೇಕಿತ್ತು. ಅದರಂತೆ ಮೊದಲ ಹಂತದಲ್ಲಿ ಕತ್ತರಿ ಪ್ರಯೋಗ ಮಾಡಿ, ಅದನ್ನು ಸ್ವಾಮೀಜಿಗಳಿಗೆ ತೋರಿಸಲಾಯಿತು. ಅಷ್ಟರಲ್ಲೇ ಮಧ್ಯ ಪ್ರವೇಶಿಸಿದ ದಲಿತ ಸಂಘಟನೆಯೊಂದು, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿತು.

'ಕಠಾರಿ ವೀರ ಸುರಸುಂದರಾಂಗಿ' ಚಿತ್ರದ ಯಾವ ದೃಶ್ಯಗಳಿಗೂ ಕತ್ತರಿ ಹಾಕಬಾರದು ಎಂದು ನ್ಯಾಯಾಲಯವು ಚಿತ್ರ ನಿರ್ಮಾಪಕರಿಗೆ ಸೂಚಿಸಿತ್ತು. ರೋಗಿ ಬಯಸಿದ್ದು ಹಾಲು, ವೈದ್ಯರು ಕೊಟ್ಟದ್ದೂ ಹಾಲು ಎಂಬಂತೆ ನಿರ್ಮಾಪಕ ಮುನಿರತ್ನ ಮೀಸೆಯಡಿಯಲ್ಲೇ ನಕ್ಕರು.

ಮುನಿರತ್ನ ತಂತ್ರವೇ?
ಕೆಲವು ಮೂಲಗಳ ಪ್ರಕಾರ, ಇದೆಲ್ಲವೂ ಮುನಿರತ್ನ ಆಡುತ್ತಿರುವ ನಾಟಕ. ಅವರ ಪ್ರಚೋದನೆಯಿಂದಾಗಿಯೇ ಸಂಘಟನೆಗಳು ಆಗಾಗ ಸದ್ದು ಮಾಡುತ್ತವೆ. ಮೊನ್ನೆ ಸ್ವಾಮೀಜಿಗಳು ಚಿತ್ರ ನೋಡುತ್ತಿರುವಾಗಲೇ ಅಲ್ಲಿಗೆ ಸಂಘಟನೆಯೊಂದು ಬಂದಿರುವುದರ ಹಿಂದೆಯೂ ಮುನಿರತ್ನ ಇದ್ದಾರೆ.

ಈ ನಡುವೆ ಕಠಾರಿ ವೀರ ಚಿತ್ರದ ದೃಶ್ಯಗಳಿಗೆ ಮತ್ತೆ ಕತ್ತರಿ ಪ್ರಯೋಗ ಮಾಡುವುದಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯೂ ವಿರೋಧ ವ್ಯಕ್ತಪಡಿಸಿದೆ ಎಂಬ ಸುದ್ದಿಗಳಿವೆ. ಒಮ್ಮೆ ಸೆನ್ಸಾರ್ ಆಗಿರುವುದರಿಂದ, ಚಿತ್ರ ವೀಕ್ಷಿಸಿದ ಎಲ್ಲಾ ಸದಸ್ಯರೂ ಒಪ್ಪಿಗೆ ನೀಡಿರುವುದರಿಂದ ಮತ್ತೆ ಕತ್ತರಿ ಹಾಕುವುದು ಯಾಕೆ ಎಂದು ಸೆನ್ಸಾರ್ ಮಂಡಳಿಯ ನಾಗರಾಜ್ ಪ್ರಶ್ನಿಸಿದ್ದಾರೆ ಎನ್ನುತ್ತವೆ ಕೆಲವು ಮೂಲಗಳು.

ವಿವಾದಗಳು ಏನೇ ಇರಲಿ, ಕನ್ನಡದಲ್ಲಿ 3ಡಿ ಚಿತ್ರ ಬಂದಿರುವುದು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಜೊಳ್ಳು ಕಥೆಯಿದ್ದರೂ 3ಡಿ ಚಮತ್ಕಾರಗಳು ಚಿತ್ರಮಂದಿರಗಳ ಎದುರು ಜನ ಸಾಲುಗಟ್ಟುವಂತೆ ಮಾಡಿವೆ.

No comments:

Post a Comment