Monday, January 14, 2013

'ತಲೆ ಇಲ್ಲದವರಿಗೆ' ಮಾತ್ರ ಉಪೇಂದ್ರ ರಿಯಲ್ ಟೋಪಿ!

ಟೋಪಿ ಹಾಕಿಸಿಕೊಳ್ಳುವವರು ಯಾರು? ಸಾಮಾನ್ಯವಾಗಿ ತಲೆ ಇಲ್ಲದವರು. ತಲೆ ಇದ್ದವರಿಗೆ ಅಷ್ಟು ಸುಲಭದಲ್ಲಿ ಟೋಪಿ ಹಾಕುವುದು ಸಾಧ್ಯವಿಲ್ಲ. ರಾಜಕಾರಣಿಗಳು ತಾವು ಟೋಪಿ ಹಾಕಿಕೊಂಡು ಇತರರಿಗೆ ಟೋಪಿ ಹಾಕುತ್ತಾರೆ. ಟೋಪಿ ಎಂದರೆ ಮೋಸ ಮಾಡುವುದು. ಹೀಗೆ ಮೋಸ ಮಾಡುವ ಕಲೆಯನ್ನೇ ಸಿನಿಮಾ ಮಾಡಿದರೆ ಹೇಗೆ? ಹೀಗೆ ಲೆಕ್ಕಾಚಾರ ಹಾಕಿ ರಿಯಲ್ ಸ್ಟಾರ್ ಉಪೇಂದ್ರ ಕಥೆ, ಚಿತ್ರಕಥೆ ಬರೆದಿರುವ ಚಿತ್ರವೇ 'ಟೋಪಿವಾಲ'!

ಉಪ್ಪಿ ಬರೆದ ಕಥೆ, ಚಿತ್ರಕಥೆಯೆಂದ ಮೇಲೆ ಸಿನಿಮಾ ಕೆಟ್ಟದಾಗಿರುವುದಿಲ್ಲ ಅನ್ನೋದು ಗ್ಯಾರಂಟಿ. ಅದರಲ್ಲೂ 'ತಲೆ ಇಲ್ಲದವರಿಗೆ' ಎಂಬ ಟ್ಯಾಗ್‌ಲೈನ್ ಚಿತ್ರಕ್ಕೆ ನೀಡಲಾಗಿದೆ. ಆದರೂ ಅವರು ಇದನ್ನು ನಿರ್ದೇಶಿಸಲು ಹೋಗಿಲ್ಲ. ಉಪ್ಪಿಯ ಅಡಿಪಾಯವನ್ನು ಬಳಸಿಕೊಂಡು ಸಂಭಾಷಣೆ ಬರೆದು, ನಿರ್ದೇಶಿಸಿರುವುದು ರೇಡಿಯೋ ಜಾಕಿ ಶ್ರೀನಿವಾಸ್. ಚಿತ್ರದಲ್ಲಿ ಉಪ್ಪಿಗೆ 'ಜಾಕಿ' ಭಾವನಾ ಮತ್ತು ಕನ್ನಡತಿ ಮೈತ್ರೇಯಿ ಎಂಬ ಇಬ್ಬರು ನಾಯಕಿಯರು.

ಗುಟ್ಟು ಬಿಟ್ಟು ಕೊಡದವರಲ್ಲಿ ಉಪ್ಪಿ ನಂಬರ್ ವನ್. ಆದರೂ ಕಥೆಯೇನು ಎಂಬ ಪ್ರಶ್ನೆಗಳು ತೂರಿ ಬಂದವು. ಆ ಪ್ರಶ್ನೆಗಳಿಗೆ ಉಪ್ಪಿ ಅಷ್ಟೇ ಜಾಣತನದಿಂದ ಉತ್ತರ ಕೊಟ್ಟು ನುಣುಚಿಕೊಂಡರು. ಆದರೆ ಎರಡನೇ ನಾಯಕಿ ಮೈತ್ರೇಯಿ ಕೆಲವು ಸುಳಿವುಗಳನ್ನು ಬಿಟ್ಟುಕೊಟ್ಟರು. ತಾನು ಮತ್ತು ಉಪ್ಪಿ ಜುವೆಲ್ಲರಿ ಅಂಗಡಿಗೆ ಕನ್ನ ಹಾಕುತ್ತೇವೆ ಅನ್ನೋದು ಅವರಿಂದ ಹೊರ ಬಿತ್ತು. ಉಪ್ಪಿಯಂತಹ ಸ್ಟಾರ್ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದೇ ಗ್ರೇಟ್. ನಟನೆಯಲ್ಲೂ ಅವರಿಂದ ಸಾಕಷ್ಟು ಪಾಠ ಕಲಿತಿದ್ದೇನೆ ಎಂದರು.

ಕಥೆಗೆ ಶ್ರೀನಿವಾಸ್ ತುಂಬಾ ಸಹಕಾರ ನೀಡಿದ್ದರು. ಒಂದು ರೀತಿಯಲ್ಲಿ ನನ್ನ ಬೆನ್ನ ಹಿಂದೆ ಬೇತಾಳದಂತಿದ್ದರು. ತುಂಬಾ ಚೆನ್ನಾಗಿ ನಿರ್ದೇಶಿಸಿದ್ದಾರೆ. ಚಿತ್ರೀಕರಣ ಬಹುತೇಕ ಮುಗಿದಿದೆ. ಇನ್ನುಳಿದಿರುವುದು ಒಂದು ಹಾಡು ಮಾತ್ರ. ಅಷ್ಟಾದರೆ ಮತ್ತೆ ಬಿಡುಗಡೆಯದ್ದೇ ಜಪ ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಚಿತ್ರಕ್ಕೆ ಇಬ್ಬರು ನಿರ್ಮಾಪಕರು. ಏಳೆಂಟು ವರ್ಷಗಳ ಹಿಂದೆ ಉಪ್ಪಿಯ 'ಓಂಕಾರ' ನಿರ್ಮಿಸಿದ್ದ ಕನಕಪುರ ಶ್ರೀನಿವಾಸ್ ಮತ್ತು 'ಶಿವ' ಖ್ಯಾತಿಯ ಕೆ.ಪಿ. ಶ್ರೀಕಾಂತ್. ಇಬ್ಬರೂ ಉಪ್ಪಿಯನ್ನು ಅಪಾದಮಸ್ತಕ ಹೊಗಳಿದರು. ಉಪ್ಪಿ ಮೇಲೆ ಸಾಕಷ್ಟು ಭರವಸೆಯಿದೆ ಎಂದು ಶ್ರೀನಿವಾಸ್ ಹೇಳಿದರೆ, ಶಿವರಾಜ್ ಕುಮಾರ್ ನಂತರ ನನಗೆ ಉಪ್ಪಿಯೇ ಫೇವರಿಟ್ ಎಂದರು ಶ್ರೀಕಾಂತ್.

ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶ್ರೀಶ ಕೂದವಳ್ಳಿ ಕ್ಯಾಮರಾ ಹಿಡಿದಿದ್ದಾರೆ. ರಂಗಾಯಣ ರಘು, ರಾಜು ತಾಳಿಕೋಟೆ, ರಾಕ್‌ಲೈನ್ ಸುಧಾಕರ್, ಮುಕ್ತಿ ಮೋಹನ್ ಮುಂತಾದವರು ಕೂಡ ನಟಿಸಿದ್ದಾರೆ. ಈಗಿನ ಲೆಕ್ಕಾಚಾರಗಳ ಪ್ರಕಾರ, ಚಿತ್ರ ಫೆಬ್ರವರಿ  ೨ನೇ ವಾರದಲ್ಲಿ  ರಾಜ್ಯದಾದ್ಯಂತ ಬಿಡುಗಡೆಯಾಗುವ ಸಂಭವ ಇದೆ .


No comments:

Post a Comment