Wednesday, September 21, 2011

ಮುಂದಿನ ಚಿತ್ರದ ತಯಾರಿಯಲ್ಲಿ ಉಪ್ಪಿ; ಯಾರು ಹೀರೋ?



ಸೂಪರ್' ಚಿತ್ರದ ಸೂಪರ್ ಯಶಸ್ಸಿನಿಂದ ರಿಯಲ್ ಸ್ಟಾರ್ ಉಪೇಂದ್ರ ಉಬ್ಬಿ ಹೋಗಿದ್ದಾರೆ. ಅದೇ ನಿಟ್ಟಿನಲ್ಲಿ ತನ್ನ ಮಹತ್ವಾಕಾಂಕ್ಷೆಯ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಆದರೆ ಆ ಚಿತ್ರದಲ್ಲಿ ತಾನೇ ನಾಯಕನೋ ಅಥವಾ ಬೇರೊಬ್ಬರನ್ನು ನಿರ್ದೇಶಿಸುತ್ತಾರೋ ಎಂಬ ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿಲ್ಲ.

ಉಪ್ಪಿ ಗಿಮಿಕ್ ಮಾಡಿದ್ದು ದಶಕಗಳ ಹಿಂದೆ. ಅದರ ನಂತರ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಕನ್ನಡದಲ್ಲಿ ಅತ್ಯದ್ಭುತ ನಿರ್ದೇಶಕರಿರುವಾಗ ಉಪೇಂದ್ರನ ಚಿತ್ರವನ್ನು ಯಾರೂ ನೋಡೋದಿಲ್ಲ ಎಂದೆಲ್ಲ ಬಾಯಿಗೆ ಬಂದಂತೆ ಟೀಕಿಸುತ್ತಿದ್ದವರನ್ನು ಸೂಪರ್ ಮೂಲಕ ಬಾಯ್ಮುಚ್ಚಿಸಿರುವ ಅವರು, ಈಗ ಎದೆಯುಬ್ಬಿಸಿ ನಿಂತಿದ್ದಾರೆ. ಮತ್ತೆ ನಿರ್ದೇಶನವನ್ನು ಮಾಡೇ ತೀರುತ್ತೇನೆ ಎಂದು ಘಂಟಾ ಘೋಷವಾಗಿ ಸಾರಿದ್ದಾರೆ.






PR
ಈಗಾಗಲೇ ನನ್ನ ನಿರ್ದೇಶನದ ಮುಂದಿನ ಸಿನಿಮಾಕ್ಕೆ ಚಿತ್ರಕಥೆ ಬರೆಯಲು ಆರಂಭಿಸಿದ್ದೇನೆ. ನನ್ನ ನಿರ್ದೇಶನ, ನನ್ನ ಚಿತ್ರ. ಅಭಿಮಾನಿಗಳಿಗೆ ಈಗಲಾದ್ರೂ ಖುಷೀನಾ ಎಂದು ಉಪ್ಪಿ ತನ್ನ ಫೇಸ್‌‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

ತನ್ನ ಮುಂದಿನ ಯೋಜನೆಗಳ ಬಗ್ಗೆ ಮಾತಿಗಿಳಿದಿರುವ ಉಪ್ಪಿ, 'ಜನ ನನ್ನ ಚಿತ್ರದ ಶೈಲಿಯನ್ನು ಮೆಚ್ಚಿದ್ದಾರೆ. ನನ್ನನ್ನು ಮತ್ತಷ್ಟು ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಸುಮ್ಮನೆ ಕುಳಿದರೆ, ಅದು ನನ್ನ ಅಭಿಮಾನಿಗಳಿಗೆ ತೀವ್ರ ನೋವನ್ನು ತರಬಹುದು. ಹಾಗಾಗಿ ತಕ್ಷಣವೇ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಳ್ಳಲು ಬಯಸುತ್ತಿದ್ದೇನೆ. ಶೀಘ್ರದಲ್ಲಿಯೇ ಈ ಕುರಿತು ಅಧಿಕೃತವಾಗಿ ತಿಳಿಸುತ್ತೇನೆ' ಎಂದಿದ್ದಾರೆ.

ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ನಾಯಕರು, ನಿರ್ದೇಶಕರುಗಳು ಚಿತ್ರದ ಬಗ್ಗೆ ನೀಡಿರುವ ಪ್ರತಿಕ್ರಿಯೆಗಳು ಸಂತಸ ತಂದಿವೆ. ಅವರಿಗೆ ನಾನು ಧನ್ಯ. ಇಂತವರು ಇಷ್ಟೊಂದು ಮಟ್ಟದ ಪ್ರೋತ್ಸಾಹ ನೀಡಿರುವುದು ಕೂಡ ನಾನು ನಿರ್ದೇಶನದಲ್ಲಿ ಮುಂದುವರಿಯಲು ಕಾರಣ ಎಂದು ಅಭಿನಂದಿಸಿದ್ದಾರೆ.

ಆದರೆ ಮುಂದಿನ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಉಪ್ಪಿ ಎಂದಿನಂತೆ ನಿರಾಕರಿಸಿದ್ದಾರೆ. ಮತ್ತೆ ನಾನೇ ನಾಯಕನಾಗಬಹುದು ಅಥವಾ ಬೇರೆ ಯಾರಾದರೂ ನಾಯಕನಾಗಬಹುದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ.

ಮೂಲಗಳ ಪ್ರಕಾರ ಸ್ವತಃ ಉಪ್ಪಿಯೇ ಅವರ ಮುಂದಿನ ಚಿತ್ರದಲ್ಲೂ ನಾಯಕರಾಗಿರುತ್ತಾರೆ. ತಪ್ಪಿದರೆ ಪುನೀತ್ ರಾಜ್‌ಕುಮಾರ್ ನಾಯಕನಾಗುತ್ತಾರೆ. ಇವೆರಡನ್ನು ಹೊರತುಪಡಿಸಿದ ಸಾಧ್ಯತೆಗಳು ಕಡಿಮೆ.

ರಾಜಕೀಯಕ್ಕೆ ಬಂದೇ ಬರ್ತೇನೆ...
ರಾಜಕೀಯಕ್ಕೆ ಬರಬೇಕೆನ್ನುವುದು ನನ್ನ ಬಹುಕಾಲದ ಆಸೆ. ನನ್ನ ಉದ್ದೇಶ ಹಣ ಮಾಡುವುದಲ್ಲ. ಜನರ ಸೇವೆ ಮಾಡಬೇಕೆನ್ನುವುದು ನನ್ನ ಬಯಕೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ಮನವಿಗಳನ್ನಷ್ಟೇ ಮಾಡಬಹುದು, ಆದರೆ ರಾಜಕಾರಣಿಯಾದರೆ ನಾನು ಆದೇಶಗಳನ್ನು ಕೂಡ ನೀಡಬಹುದು -- ಇದು ಉಪೇಂದ್ರ ಮಾತುಗಳು.






PR
ಸೂಪರ್ ಚಿತ್ರದಲ್ಲಿರುವಂತೆ ಮುಖ್ಯಮಂತ್ರಿಯಾಗುವುದು ನಿಮ್ಮ ಜೀವನದ ಗುರಿಯೇ ಎಂಬ ಪ್ರಶ್ನೆಗೆ, 'ನಾನು ಈ ಚಿತ್ರವನ್ನು ಮಾಡುವಾಗ ಅದರ ಕುರಿತು ಯೋಚನೆ ಮಾಡಿರಲಿಲ್ಲ. ಆದರೆ ಚಿತ್ರವನ್ನು ನೋಡಿದ ಕೆಲ ಮಂದಿ, ನಾನು ನಿಜ ಜೀವನದಲ್ಲೂ ಒಬ್ಬ ರಾಜಕಾರಣಿಯಾಗಬೇಕು ಎಂದು ಬಯಸುತ್ತಿದ್ದಾರೆ' ಎಂದರು.

ರಾಜಕೀಯಕ್ಕೆ ಬರುತ್ತಿದ್ದಾರೆ ಎಂದ ಕೂಡಲೇ ಉಪ್ಪಿ ಸಿನಿಮಾಗಳಿಗೆ ಗುಡ್ ಬೈ ಹೇಳುತ್ತಿದ್ದಾರೆ ಎಂದು ಯಾರು ಕೂಡ ಅಂದುಕೊಳ್ಳಬೇಕಾಗಿಲ್ಲ.

ನಿರ್ದೇಶನ ಮತ್ತು ನಟನೆ ಯಾವತ್ತೂ ಸಾಯದ ನನ್ನ ವ್ಯಾಮೋಹ. ರಾಜಕೀಯಕ್ಕೆ ಬಂದಿರುವ ಹಲವು ಸಿನಿಮಾ ಮಂದಿ ಈ ಉದ್ಯಮಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ನನ್ನ ಕೊಡುಗೆ ಖಂಡಿತಾ ಯಾವುದರಲ್ಲೂ ಕಡಿಮೆಯಾಗಿರದು ಎಂದು ಸಂಶಯಗಳಿಗೆ ಉಪ್ಪಿ ಉತ್ತರಿಸಿದ್ದಾರೆ.

ಆದರೆ ರಾಜಕೀಯಕ್ಕೆ ಬರುವುದು ಯಾವಾಗ ಮತ್ತು ಯಾವ ಪಕ್ಷಕ್ಕೆ ಸೇರಲಿದ್ದಾರೆ ಮುಂದಾದುವುಗಳನ್ನು ಬಿಟ್ಟುಕೊಟ್ಟಿಲ್ಲ.

ನನಗೆ ಸಾಕಷ್ಟು ಕಲಿಯೋದಿದೆ. ನನ್ನ ಉದ್ದೇಶಿತ ಕಾರ್ಯಕ್ಕೆ ಇಳಿಯುವ ಮೊದಲು ಜನತೆಯಲ್ಲಿ ನಂಬಿಕೆ ಹುಟ್ಟಿಸುವ ಕೆಲಸ ಆಗಬೇಕಿದೆ.

ಯಾಕೆ ನಾನು ರಾಜಕೀಯಕ್ಕೆ ಬರಬಾರದೇ? ಯಾವತ್ತಾದರೂ ರಾಜಕೀಯಕ್ಕೆ ಬಂದೇ ಬರುತ್ತೇನೆ. ಆದರೆ ಯಾವುದೇ ಪಕ್ಷಕ್ಕೆ ಸೇರೋದಿಲ್ಲ. ಸದ್ಯಕ್ಕಂತೂ ನನ್ನಲ್ಲಿ ಅಂತಹ ಯಾವುದೇ ಯೋಜನೆಗಲಿಲ್ಲ. ಎಲ್ಲವೂ ದೇವರ ಕೈಯಲ್ಲಿದೆ. ಆತ ಬಯಸಿದರೆ ನಡೆಯದ್ದು ಏನಿದೆ? ನನ್ನ ಕಲ್ಪನೆಯ 2030ರ ಭಾರತ ಅಸಾಧ್ಯವೇನಲ್ಲ. ಆದರೆ ಜನ ಎದ್ದೇಳಬೇಕು. ನನ್ನ ಯತ್ನ ಜನರಿಗೆ ಸ್ಫೂರ್ತಿ ನೀಡುವುದು ಮಾತ್ರ.

ಹಾಗೆ ನೋಡಿದರೆ ಉಪೇಂದ್ರ ಸಿನಿಮಾ ರಂಗಕ್ಕೆ ಬಂದಿರುವುದೇ ರಾಜಕೀಯದ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡಂತೆ. ರಾಜಕೀಯ ವೇದಿಕೆಗಾಗಿ ನನಗೆ ಮೆಟ್ಟಿಲುಗಳು ಬೇಕಾಗಿದ್ದವು. ಅದು ಸಿನಿಮಾ ರಂಗ. ಇಲ್ಲೂ ಸಾಧನೆ ಮಾಡುತ್ತೇನೆ. ಆದರೆ ನನ್ನ ಗುರಿ ನನ್ನಿಂದಾಗುವ ಕೊಡುಗೆಯನ್ನು ಸಮಾಜಕ್ಕೆ ನೀಡುವುದು ಎಂದಿದ್ದಾರೆ.

ಉಪ್ಪಿಯ ಕನಸುಗಳು ಎಷ್ಟರ ಮಟ್ಟಿಗೆ ನನಸಾಗಬಹುದು ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ

No comments:

Post a Comment