Pages

Monday, May 14, 2012

ಶಿರೂರು ಶ್ರೀಗಳ ಬಹಿರಂಗ ಕ್ಷಮೆಯಾಚಿಸಿದ ಉಪೇಂದ್ರ

ಹಿಂದೂ ಪರ ಸಂಘಟನೆಗಳ ತೀವ್ರ ವಿರೋಧಕ್ಕೆ ಕಡೆಗೂ 'ಕಠಾರಿವೀರ' ಮಣಿದಿದ್ದಾನೆ. ಚಿತ್ರದಲ್ಲಿ ಹಿಂದೂ ದೇವಾನುದೇವತೆಗಳನ್ನು ಅವಹೇಳನ ಮಾಡಲಾಗಿದೆ ಎಂದು ಭಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮಸೇನೆ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.

ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಉಪೇಂದ್ರ ಅವರು ಸೋಮವಾರ (ಮೇ 14) ಉಡುಪಿಗೆ ಭೇಟಿ ನೀಡಿ ಶಿರೂರು ಲಕ್ಷ್ಮಿವರ ತೀರ್ಥ ಶ್ರೀಗಳ ಬಹಿರಂಗ ಕ್ಷಮೆಯಾಚಿಸಿದರು. ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು ತಪ್ಪು ಕಾಣಿಕೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಉಪೇಂದ್ರ ಜೊತೆಗೆ ಚಿತ್ರದ ನಿರ್ಮಾಪಕ ಮುನಿರತ್ನ ಅವರೂ ಇದ್ದರು. ಭಾನುವಾರ (ಮೇ13) ಭಜರಂಗದಳ ಕಾರ್ಯಕರ್ತರು ಸಕಲೇಶಪುರದಲ್ಲಿ ಉಪೇಂದ್ರ ಅವರಿಗೆ ಘೇರಾವ್ ಹಾಕಿ ಕ್ಷಮೆಯಾಚನೆಗೆ ಆಗ್ರಹಿಸಿದ್ದರು. ತಮ್ಮ ಆಪ್ತ ಸಹಾಯಕ ರಮೇಶ್ ಮದುವೆಗೆ ಉಪ್ಪಿ ಸಕಲೇಶಪುರಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಅವರಿಗೆ ಘೇರಾವ್ ಹಾಕಿದ ಭಜರಂಗದಳ ಕಾರ್ಯಕರ್ತರು, ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಕೋರಬೇಕು ಎಂದು ಆಗ್ರಹಿಸಿದರು. ಉಪೇಂದ್ರ ಇದಕ್ಕೆ ಒಪ್ಪಲಿಲ್ಲ. ಬಳಿಕ ಅವರ ಅಂಗರಕ್ಷಕರು ಕ್ಷಮೆಯಾಚಿಸಿದ ಮೇಲೆ ಉಪ್ಪಿ ಅವರ ಕಾರನ್ನು ಮುಂದೆ ಹೋಗಲು ಬಿಡಲಾಗಿತ್ತು.

ಈ ಮೂಲಕ ಕಠಾರಿವೀರ ಚಿತ್ರದ ಮತ್ತೊಂದು ವಿವಾದಕ್ಕೆ ತೆರೆಬಿದ್ದಂತಾಗಿದೆ. ಚಿತ್ರದಲ್ಲಿನ ಎಂಟು ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿಬೀಳಲಿದೆ. ಕಠಾರಿವೀರ ಚಿತ್ರದ ಪರಿಷ್ಕೃತ ಆವೃತ್ತಿಯಾವಾಗ ಹೊರಬೀಳುತ್ತದೋ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಪರಿಷ್ಕೃತ ಆವೃತ್ತಿಗೆ ಸೆನ್ಸಾರ್ ಅನುಮತಿ ನೀಡುತ್ತದೋ ಇಲ್ಲವೋ ಎಂಬ ಸಮಸ್ಯೆಯೂ ತಲೆಯೆತ್ತಿದೆ.

No comments:

Post a Comment