Pages

Sunday, May 13, 2012

ಕೊನೆಗಾಣದ ಕಠಾರಿವೀರ ವಿವಾದ; ಮತ್ತಷ್ಟು ವಿಘ್ನ?

ಕಠಾರಿವೀರ ಸುರಸುಂದರಾಂಗಿ ಚಿತ್ರಕ್ಕೂ ವಿವಾದಕ್ಕೂ ಇರುವ ನಂಟು ಸದ್ಯಕ್ಕಂತೂ ಬಿಡುವ ಲಕ್ಚಣ ಗೋಚರಿಸುತ್ತಿಲ್ಲ. ನಿರ್ಮಾಪಕ ಮುನಿರತ್ನ ವಿರುದ್ಧ ಕಾನೂನು ಸಮರ, ಚಿತ್ರವನ್ನು ನಿಷೇಧಿಸುವಂತೆ ಸರ್ಕಾರ ಹಾಗೂ ಸೆನ್ಸಾರ್ ಮಂಡಳಿಗೆ ಪತ್ರ, ಹಾಗೂ ನಾಳೆ (ಮೇ 14, 2012) ರಾಜ್ಯಾದ್ಯಂತ ಚಿತ್ರದ ಪ್ರದರ್ಶನದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥರಾದ ಪ್ರಮೋದ್ ಮತಾಲಿಕ್ ಘೋಷಿಸಿದ್ದರು. ಅದಾದ ನಂತರ ಉಡುಪಿಯಲ್ಲಿ ನಿನ್ನೆ ಸಂಧಾನ ಸಭೆ ನಡೆದಿದೆ.

ಕಠಾರಿವೀರ ಚಿತ್ರದಲ್ಲಿ ಸುಮಾರು 7 ರಿಂದ 8, ಹಿಂದೂ ದೇವಾನುದೇವತೆಗಳ ಮೇಲಿನ ಅವಹೇಳನಕಾರಿ ಸಂಭಾಷಣೆ ಹಾಗೂ ದೃಶ್ಯಗಳನ್ನು ಕಿತ್ತುಹಾಕಲು ಸಭೆಯಲ್ಲಿ ಷರತ್ತು ವಿಧಿಸಲಾಗಿದೆ. ಇದಕ್ಕೆ ಚಿತ್ರತಂಡ ಒಪ್ಪಿದೆ ಹಾಗೂ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಹೇಳಲಾಗಿತ್ತಾದರೂ ಇಂದು ಬೆಳಿಗ್ಗೆ ಮತ್ತೆ ಉಡುಪಿ ಚಿತ್ರಮಂದಿರಗಳಿಂದ ಪ್ರೇಕ್ಷಕರನ್ನು ಆಚೆ ಕಳಿಸಿ ಪ್ರದರ್ಶನ ರದ್ದುಗೊಳಿಸಿರುವ ಬೆಳವಣಿಗೆ ನಡೆದಿದೆ.

ಇದೀಗ ಮುಂದೇನಾಗುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡಿದೆ. ಬಿಡುಗಡೆ ವೇಳೆ ಘೋಷಿಸಿದ ನಂತರ ಒಂದೊಂದಾಗಿ ವಿಘ್ನಗಳನ್ನು ಕಂಡಿರುವ ಈ ಚಿತ್ರ, ಇನ್ನೂ ಅದೇ ದಾರಿಯಲ್ಲೇ ಮುಂದುವರಿಯುವಂತಾಗಿದೆ. ನಾಳೆ ಅದೇನು ಗ್ರಹಚಾರ ಕಾದಿದೆಯೋ ಎಂದು ಚಿತ್ರತಂಡ ಆಕಾಶಕ್ಕೆ ಮುಖ ಮಾಡುವಂತಾಗಿದ್ದರೂ ನಿರ್ಮಾಪಕ ಮುನಿರತ್ನ ಎಲ್ಲ ಸವಾಲನ್ನು ಎದುರಿಸಿ ನಿಲ್ಲುವುದಾಗಿ ಘೋಷಿಸಿದ್ದಾರೆ.

No comments:

Post a Comment