Pages

Friday, May 25, 2012

ಬೂದಿ ಮುಚ್ಚಿದ ಕೆಂಡವಾಗಿರುವ ಕಠಾರಿವೀರ ವಿವಾದ

ಕಠಾರಿ ವೀರ ಸುರಸುಂದರಾಂಗಿ ಚಿತ್ರದ ಗಲಾಟೆ, ಸದ್ಯಕ್ಕೆ ತಣ್ಣಗಾಗಿದೆ. ಚಿತ್ರಗಳಲ್ಲಿನ ಕೆಲವು ದೃಶ್ಯಗಳು ಹಾಗೂ ಸಂಭಾಷಣೆಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹಿಂದೂ ಸಂಘಟನೆಗಳು ಮತ್ತು ಸ್ವಾಮೀಜಿಗಳು ಬೊಬ್ಬೆಹೊಡೆದಿದ್ದವು.

'ಕಠಾರಿ ವೀರ ಸುರಸುಂದರಾಂಗಿ' ಚಿತ್ರದ ಎಂಟು ದೃಶ್ಯಗಳಿಗೆ ಕತ್ತರಿ ಹಾಕಬೇಕು ಅಥವಾ ಪ್ರದರ್ಶನವನ್ನು ರದ್ದುಪಡಿಸಬೇಕು ಎಂದು ಸಾಕಷ್ಟು ವಾದ-ವಿವಾದ ನಡೆದಿತ್ತು. ಅದೇ ವೇಳೆ ಮಧ್ಯೆ ತೂರಿಕೊಂಡ ದಲಿತ ಸಂಘಟನೆಯೊಂದು ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂತು.

ಇಷ್ಟೂ ದಿನ ನಡೆದ ಬೆಳವಣಿಗೆಗಳೆಲ್ಲವೂ ಈಗ ತಣ್ಣಗಾಗಿವೆ. ಇದೆಲ್ಲವೂ 'ನಾಟಕೀಯ ಬೆಳವಣಿಗೆ' ಎನ್ನಲಾಗುತ್ತಿದೆ. ಈಗ ಕಠಾರಿವೀರ ಸದ್ದು-ಸುದ್ದಿ ಅಡಗಿದೆ. ಆದರೆ ಚಿತ್ರವು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬಂದ ಮಾಹಿತಿ ಪ್ರಕಾರ, ನಿರ್ಮಾಪಕ ಮುನಿರತ್ನರಿಗೆ ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಸ್ಸಾಗಿದೆ.

ಹಾಗೆ ನೋಡಿದರೆ, ಚಿತ್ರಕ್ಕೆ ಬಿಡುಗಡೆಯ ಪೂರ್ವದಲ್ಲೇ ಸಾಕಷ್ಟು 'ಅಪಪ್ರಚಾರದ (ತಂತ್ರ?!) ಮೂಲಕ ಪ್ರಚಾರ ಕೊಡಲಾಯಿತು. ಆಪ್ತಮಿತ್ರರಾದ ಕೆ. ಮಂಜು ಹಾಗೂ ಮುನಿರತ್ನ, ಹುಟ್ಟಾ ಶತ್ರುಗಳಂತೆ ಮಾಧ್ಯಮಗಳ ಮೂಲಕ ಕಚ್ಚಾಡಿದರು. ಸಂಭಾಷಣೆ ಬರೆದ ತಪ್ಪಿಗೆ ಉಪ್ಪಿ, ಶಿರೂರು ಮಠಕ್ಕೆ ಹೋಗಿ ಅಡ್ಡಬಿದ್ದಿದ್ದೂ ಆಯ್ತು.

ಆದರೆ ಅವೆಲ್ಲವೂ ಕೇವಲ ಡ್ರಾಮಾಗಳು ಎನ್ನಲಾಗುತ್ತಿದೆ. ಪ್ರೇಕ್ಷಕರಿಂದ ಆರಂಭದಲ್ಲಿ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳದ ಈ ಚಿತ್ರ, ವಿವಾದದ ನಂತರ ಸಾಕಷ್ಟು ಗಳಿಕೆ ಕಂಡಿದೆ. ಅದರಲ್ಲೂ 3ಡಿ ವ್ಯವಸ್ಥೆಯಿರುವ ಚಿತ್ರಮಂದಿರಗಳಲ್ಲಿ ಚಿತ್ರ ತೀರಾ ಚೆನ್ನಾಗಿ ಓಡುತ್ತಿದೆ. ನಿರ್ಮಾಪಕ ಮುನಿರತ್ನರಿಗೆ ಈಗ ಕಾಸು ಎಣಿಸುವುದೇ ಕೆಲಸ.

ಕಠಾರಿವೀರದ ವಿವಾದಗಳು ಏನೇ ಇರಲಿ, ಕನ್ನಡದಲ್ಲಿ ಮೊದಲ ಬಾರಿಗೆ ಸಂಪೂರ್ಣ 3ಡಿ ಆಧಾರಿತ ಚಿತ್ರ ಬಂದಿದೆ. ಅದು ಪ್ರೇಕ್ಷಕರಿಗೆ ಬದಲಾವಣೆ ಎನಿಸಿ ಖುಷಿ ಕೊಟ್ಟಿದೆ. ಸಂಭಾಷಣೆ ಹಾಗೂ ದೃಶ್ಯಗಳು ಹಿಂದೂ ಸಂಘಟನೆಗಳಿಗೆ ಬೇಸರ ತರಿಸುವಂತಿವೆ ಎಂಬ ಹೇಳಿಕೆಗಳ ನಡುವೆಯೂ ಚಿತ್ರಮಂದಿರಗಳ ಎದುರು ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಒಟ್ಟಿನಲ್ಲಿ, ಚಿತ್ರ ನಿರ್ಮಾಪಕರ ಉದ್ದೇಶವಂತೂ ಈಡೇರಿದೆ. ಪ್ರೇಕ್ಷಕರ ಉದ್ದೇಶವೂ ಈಡೇರಿದೆ ಎಂಬುದನ್ನು ಪ್ರತಿಕ್ರಿಯೆ ಮೂಲಕ ಹೇಳಬಹುದು. ಹಾಗಾದರೆ ಗಲಾಟೆ, ವಾದ-ವಿವಾದಗಳ ಮರ್ಮವೇನು ಎಂಬುದನ್ನು ಸಂಬಂಧಪಟ್ಟವರು ಬಾಯಿಬಿಡಬೇಕು ಅಷ್ಟೇ.

ಎಲ್ಲಕ್ಕಿಂತಲೂ ಮುಖ್ಯವಾಗಿ ಎಲ್ಲರೂ ಆಗಾಗ ಹೇಳುವಂತೆ, 'ಸಿನಿಮಾ ಚೆನ್ನಾಗಿ ಇದ್ದರೆ ಜನರು ಬಂದೇ ಬರುತ್ತಾರೆ' ಎಂಬ ಮಾತನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರೆ ತಪ್ಪಾ, ಸರಿಯಾ!? ಓದುಗರೇ, ನೀವೇ ಹೇಳಿ...

No comments:

Post a Comment