Pages

Wednesday, September 21, 2011

ಹುಸಿ ಮದ್ವೆಯಲ್ಲಿ ಹೊಡೆದಾಟ ಅರ್ಧಕೋಟಿಗೂ ಹೆಚ್ಚು ಖರ್ಚು!


EVENT
 
ನಿರ್ಮಾಪಕ ಕೆ. ಮಂಜುರವರಿಗೆ ಅಭಿಮಾನಿಗಳು ಮತ್ತು ಉದ್ಯಮದವರು ಪ್ರೀತಿಯಿಂದ ಕರೆಯುವುದು ಗಂಡುಗಲಿ ಮಂಜು ಎಂದೇ. ಚಿತ್ರಗಳ ಯಶಸ್ಸು ಮತ್ತು ಸೋಲುಗಳನ್ನು ಲೆಕ್ಕಿಸದೆ ಒಂದರ ನಂತರ ಒಂದರಂತೆ ಅವರು ಚಿತ್ರಗಳನ್ನು ನಿರ್ಮಿಸುವ ಪರಿಯೇ ಅವರ ಈ ಬಿರುದಿಗೆ ಕಾರಣವಾಗಿರಲಿಕ್ಕೂ ಸಾಕು.


ಉಪೇಂದ್ರ ಅಭಿನಯದ 'ಗಾಡ್‌ಫಾದರ್' ಚಿತ್ರದ ಒಂದಷ್ಟು ದೃಶ್ಯಗಳಿಗೆಂದು ಅವರು ಮಾಡಿರುವ ಖರ್ಚಿನ ವಿವರಗಳನ್ನು ನೋಡುತ್ತಿದ್ದರೆ ಅವರು ನಿಜಕ್ಕೂ ಗಂಡುಗಲಿಯೇ ಎನಿಸುತ್ತದೆ. ದೊಡ್ಡಬಳ್ಳಾಪುರದ ಸಮೀಪದ ಸಿಂಗನಹಳ್ಳಿ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿ ಚಿತ್ರಿಸಿದ ಮದುವೆಯ ದೃಶ್ಯ ಹಾಗೂ ಹೊಡೆದಾಟದ ದೃಶ್ಯಗಳಿಗೆಂದೇ ನಾಲ್ಕು ಕ್ಯಾಮರಾಗಳನ್ನು ಬಳಸಲಾಯಿತಂತೆ. ಇದಕ್ಕೆ ಅರ್ಧಕೋಟಿಗೂ ಹೆಚ್ಚು ಹಣ ಖರ್ಚಾಯಿತು ಎಂಬುದು ವಿಶೇಷ.

ಬೆಂಗಳೂರು, ಮಡಿಕೇರಿ, ಮೈಸೂರು ಮೊದಲಾದ ಕಡೆಗಳಲ್ಲಿ ಚಿತ್ರೀಕರಣವನ್ನು ನಡೆಸಿರುವುದು ಮಾತ್ರವಲ್ಲದೇ ಚಿತ್ರತಂಡವು ಸದ್ಯದಲ್ಲಿಯೇ ಸ್ವಿಜರ್‌ಲೆಂಡ್‌ಗೆ ತೆರಳಲಿದೆಯಂತೆ. ಈ ಎಲ್ಲಾ ಕಾರಣಗಳಿಂದಲೇ ಉಪೇಂದ್ರ ಅಭಿನಯದ ಚಿತ್ರಗಳ ಪೈಕಿ ಅತಿ ಹೆಚ್ಚು ಬಜೆಟ್‌ನ ಚಿತ್ರ ಎಂಬ ಕೀರ್ತಿಯನ್ನು 'ಗಾಡ್‌ಫಾದರ್' ಚಿತ್ರ ದಕ್ಕಿಸಿಕೊಂಡಿದೆ ಎನ್ನಬಹುದು.

ಈ ಬಹುಕೋಟಿ ವೆಚ್ಚದ ಚಿತ್ರದಲ್ಲಿ ಉಪೇಂದ್ರ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರ ಜೊತೆಗೆ ಸಂಭಾಷಣೆಯನ್ನೂ ಬರೆದಿರುವುದು ವಿಶೇಷ. ಉಪೇಂದ್ರ ಚಿತ್ರೋದ್ಯಮವನ್ನು ಪ್ರವೇಶಿಸಿದ್ದೇ ಸಂಭಾಷಣಾಕಾರರಾಗಿ ಎಂಬುದನ್ನಿಲ್ಲಿ ಸ್ಮರಿಸಿಕೊಳ್ಳುವುದು ಅಗತ್ಯ.

ಖ್ಯಾತ ತಾರೆ ಜಯಮಾಲಾರವರ ಮಗಳು ಸೌಂದರ್ಯ ಈ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಯಾಥರೀನ್‌, ಸುಧಾ ಬೆಳವಾಡಿ, ರಮೇಶ್‌ಭಟ್‌, ರವೀಂದ್ರ ಮೊದಲಾದವರ ತಾರಾಗಣವನ್ನು ಹೊಂದಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವುದಂತೂ ನಿಜ.

1 comment: