Pages

Wednesday, December 31, 2014

ಶಿವಂ ಪೂರ್ತಿ ಹೊಸತನನಿತ್ಯನೂತನ


ಬೇರೆ ಯಾವ ತರಹ ಪಾತ್ರ ಕೊಡೋದು ಉಪೇಂದ್ರಂಗೆ? ಇಲ್ಲಿಂದ ಶುರುವಾಯಿತಂತೆ 'ಶಿವಂ' ಚಿತ್ರದ ಪ್ರಯಾಣ. ಸುಮಾರು ಎರಡು ವರ್ಷಗಳ ಹಿಂದೆ ಶುರುವಾದ ಈ ಪ್ರಯಾಣ, ಈಗ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಚಿತ್ರ ಇನ್ನೇನು ಜನವರಿ ಎರಡರಂದು ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಶ್ರೀನಿವಾಸರಾಜು ಅವರನ್ನು ಮಾತಾಡಿಸಿದರೆ, ಚಿತ್ರ ನಡೆದು ಬಂದ ದಾರಿಯನ್ನು ಅವರು ವಿವರಿಸಿದರು. ಚಿತ್ರ ಶುರುವಾಗಿದ್ದು, ಮುಂದುವರೆದಿದ್ದು ಮತ್ತು ಈಗ ಬಿಡುಗಡೆಯಾಗುತ್ತಿರುವುದರ ಬಗ್ಗೆ ವಿವರವಾಗಿ ಮಾತಾಡಿದರು.

ಬೇರೆ ಯಾವ ತರಹದ ಪಾತ್ರ ಕೊಡೋದು ಉಪೇಂದ್ರಂಗೆ? ಹಾಗೊಂದು ಯೋಚನೆ ಶ್ರೀನಿವಾಸರಾಜು ಅವರ ತಲೆಗೆ ಬಂತಂತೆ. ಅದಕ್ಕೆ ಕಾರಣ, ಅಷ್ಟರಲ್ಲಿ ಉಪೇಂದ್ರ ಬಹಳಷ್ಟು ಪಾತ್ರಗಳನ್ನು ಮಾಡಿ ಮುಗಿಸಿದ್ದು. 'ಅದುವರೆಗೂ ಮಾಡಿದ ಪಾತ್ರಗಳನ್ನು ಬಿಟ್ಟು, ಬೇರೆ ಏನಾದರೂ ಹೊಸದನ್ನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ಉಪೇಂದ್ರ ಪೂಜಾರಿ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಗೊತ್ತಾಯಿತು. ಮೊದಲು ಪಾತ್ರ ಹುಟ್ಟಿತು. ಅಲ್ಲಿಂದ ಕಥೆ ಹುಟ್ಟಿತು' ಎಂದು ವಿವರಿಸುತ್ತಾರೆ ಶ್ರೀನಿವಾಸರಾಜು.

ಇಷ್ಟಕ್ಕೂ ಯಾಕೆ ಪೂಜಾರಿಯ ಪಾತ್ರ ಎಂದರೆ, ಅದಕ್ಕೂ ಶ್ರೀನಿವಾಸರಾಜು ಅವರ ಬಳಿ ಉತ್ತರವಿದೆ. ಪೂಜಾರಿಗಳೇ ನಿಜವಾದ ಹೀರೋಗಳು ಎಂಬುದು ಶ್ರೀನಿವಾಸರಾಜು ನಂಬಿಕೆ. 'ನನ್ನ ಪ್ರಕಾರ ಪೂಜಾರಿಗಳು ನಿಜವಾದ ಹೀರೋಗಳು. ಏಕೆಂದರೆ, ಅವರು ಕುಡಿಯೋಲ್ಲ, ಸಿಗರೇಟು ಸೇದುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರು ಧರ್ಮದ ಪ್ರಕಾರ ಬದುಕುವುದರ ಜೊತೆಗೆ ಅವರು ಧರ್ಮವನ್ನು ರಕ್ಷಿಸುತ್ತಾರೆ ...'

ಇದು ಒಂದು ಅಂಶವಷ್ಟೇ. ಇದರ ಜೊತೆಗೆ ಇನ್ನೊಂದು ಅಂಶವನ್ನು ಮಿಕ್ಸ್‌ ಮಾಡಿ ಶ್ರೀನಿವಾಸರಾಜು ಚಿತ್ರದ ಕಥೆ ಮಾಡಿದ್ದಾರಂತೆ. ಏನದು, ಆ ಇನ್ನೊಂದು ಅಂಶ ಎಂದರೆ, 'ಮನುಷ್ಯರಿಗೆ ಒಂದು ಪದ್ಧತಿ ಇದೆ. ಅದರ ಪ್ರಕಾರ ಬದುಕಬೇಕು. ದೇವಸ್ಥಾನದ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಬಾರದು ಎಂದರೆ ಅದಕ್ಕೆ ಒಂದು ಕಾರಣವಿದೆ. ಇಲ್ಲ, ನಾವು ಹಾಕಿಕೊಂಡು ಹೋದರೆ ಏನಾಗುತ್ತೆ ಎಂದು ಕೇಳಿದ್ರೆ ಏನು ಹೇಳ್ಳೋದು? ಅದೇ ರೀತಿ ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದು ಸ್ನಾನ, ಸಂಧ್ಯಾವಂದನೆ ಮುಗಿಸಿ ತಿನ್ನಬೇಕು. ಆದರೆ, ನಾವು ಬೆಳಿಗ್ಗೆ ಎದ್ದ ತಕ್ಷಣ ಊಟ ಮಾಡ್ತೀವಿ ಎಂದರೆ ಅದಕ್ಕೆ ಏನು ಹೇಳ್ಳೋದು? ಮನುಷ್ಯನ ಎಂದ ಮೇಲೆ ಕೆಲವು ಪದ್ಧತಿಗಳಿರುತ್ತವೆ. ಇಲ್ಲದಿದ್ದರೆ ಮನುಷ್ಯನಿಗೂ, ಪ್ರಾಣಿಗಳಿಗೂ ವ್ಯತ್ಯಾಸಗಳಿರುವುದಿಲ್ಲ ...'

ಈ ಎರಡು ಅಂಶಗಳನ್ನಿಟ್ಟುಕೊಂಡು ಶ್ರೀನಿವಾಸರಾಜು 'ಶಿವಂ' ಕಥೆ ಬರೆದಿದ್ದಾರಂತೆ. ಅವರು ಹೇಳುವಂತೆ, ಇಲ್ಲಿ ಮೆಸೇಜ್‌ ಎನ್ನುವುದಕ್ಕಿಂತ ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ ಎನ್ನುತ್ತಾರೆ ಅವರು. 'ಇದೊಂದು ಕಮರ್ಷಿಯಲ್‌ ಚಿತ್ರ. ಅಷ್ಟೇ ಅಲ್ಲ, ಉಪೇಂದ್ರ ಅಭಿನಯದ ಚಿತ್ರ. ಆದರೆ, ಅವರ ಹಿಂದಿನ ಚಿತ್ರಗಳಿಗಿಂಥ ವಿಭಿನ್ನವಾಗಿರುವುದಷ್ಟೇ ಅಲ್ಲ, ರಿಚ್‌ ಆಗಿದೆ. ಈ ಚಿತ್ರದ ಇನ್ನೊಂದು ಸ್ಪೆಷಾಲಿಟಿ ಎಂದರೆ, ಈ ಚಿತ್ರದಲ್ಲಿ ತೋರಿಸಿರುವ ಲೊಕೇಶನ್‌ಗಳನ್ನು$ನೀವು ಇದುವರೆಗೂ ಯಾವುದೇ ಕನ್ನಡದ ಚಿತ್ರದಲ್ಲೂ ನೋಡಿರುವುದಕ್ಕೆ ಸಾಧ್ಯವಿಲ್ಲ. ಅಷ್ಟೊಂದು ವಿಭಿನ್ನವಾದ ಲೊಕೇಶನ್‌ಗಳು ಈ ಚಿತ್ರದಲ್ಲಿ. ಲೊಕೇಶನ್‌ಗಳಷ್ಟೇ ಅಲ್ಲ, ಸಂಭಾಷಣೆಗಳು ಸಹ ಬಹಳ ವಿಭಿನ್ನವಾಗಿ ಮೂಡಿಬಂದಿದೆ.

ಉಪೇಂದ್ರ ಅವರ ಚಿತ್ರಗಳಲ್ಲಿ ಸಂಭಾಷಣೆಗಳಿಗೆ ಸ್ಕೋಪ್‌ ಜಾಸ್ತಿ. ಆದರೆ, ಒಂದಂತೂ ಹೇಳಬಲ್ಲೆ. ಇಲ್ಲಿರುವ ಸಂಬಾಷಣೆಗಳಲ್ಲಿ ಶೇ. 10ರಷ್ಟು ಬರೆ ಎಲ್ಲೂ ಕೇಳುವುದಕ್ಕೆ ಸಾಧ್ಯವೇ ಇಲ್ಲ' ಎಂದು ಪಕ್ಕಾ ವಿಶ್ವಾಸದಿಂದ ಅವರು ಹೇಳುತ್ತಾರೆ.
ಇನ್ನು ಈ ಚಿತ್ರದಲ್ಲಿ ಉಪೇಂದ್ರ ಮತ್ತೂಮ್ಮೆ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಪ್ಪಿಗೆ ಒಂದೇ ಚಿತ್ರದಲ್ಲಿ ಎರಡು, ಮೂರು ಪಾತ್ರಗಳನ್ನು ಮಾಡುವುದು ಹೊಸದೇನಲ್ಲ. ಆದರೆ, ಇಲ್ಲಿಯ ವಿಶೇಷತೆಯೆಂದರೆ, ಉಪ್ಪಿ ಒಂದು ಕಡೆ ಪೂಜಾರಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಇನ್ನೊಂದು ಪಾತ್ರ ಮಾಫಿಯಾದು ಎಂದರೆ ನಂಬಬೇಕು. 'ಉಪ್ಪಿ ಸಾರ್‌ಗೆ ಎರಡು ವಿಭಿನ್ನ ಪಾತ್ರಗಳಿವೆ. ಒಂದು ಪಾಸಿಟಿವ್‌. ಅದು ಪೂಜಾರಿಯದು. ಇನ್ನೊಂದು ನೆಗೆಟಿವ್‌. ಅದು ಮಾಫಿಯಾವನ್ನು ಪ್ರತಿನಿಧಿಸುವ ಪಾತ್ರ. ಈ ಎರಡು ಪಾತ್ರಗಳು ಏಕೆ ಬರುತ್ತವೆ ಮತ್ತು ಚಿತ್ರದಲ್ಲಿ ಆ ಪಾತ್ರಗಳ ಮಹತ್ವವೇನು ಎಬುದನ್ನು ನೀವು ಚಿತ್ರದಲ್ಲೇ ನೋಡಬೇಕು' ಎಂಬುದು ಶ್ರೀನಿವಾಸರಾಜು ಅಭಿಪ್ರಾಯ.

'ಶಿವಂ' ಬಗ್ಗೆ ಶ್ರೀನಿವಾಸರಾಜು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 'ನನ್ನ ಹಿಂದಿನ ಚಿತ್ರ 'ದಂಡುಪಾಳ್ಯ' ಸಾಕಷ್ಟು ಜನರನ್ನು ತಲುಪಿತು. ಆದರೆ, ಅದೊಂದು ಕ್ರೈಮ್‌ ಚಿತ್ರ ಎಂಬ ಹಣೆಪಟ್ಟಿಯೊಂದಿಗೆ ಬಿಡುಗಡೆಯಾಗಿತ್ತು. ಇಲ್ಲಿ ಹಾಗೇನಿಲ್ಲ. ಇದೊಂದು ಕಮರ್ಷಿಯಲ್‌ ಚಿತ್ರ. 'ಶಿವಂ' ಹಿಟ್‌ ಆಗುತ್ತದೋ, ಇಲ್ಲವೋ ಎಂಬುದು ನಂತರದ ಮಾತು. ಒಂದು ಕಥೆಯನ್ನು ಕಮರ್ಷಿಯಲ್‌ ಮತ್ತು ಪಕ್ಕಾ ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಅದು ಎಲ್ಲರಿಗೂ ರೀಚ್‌ ಆಗಲಿ ಎನ್ನುವುದು ನನ್ನ ಆಸೆ' ಎನ್ನುತ್ತಾರೆ ಶ್ರೀನಿವಾಸರಾಜು.

ರಾಗಿಣಿ ವರ್ಸಸ್‌ ಸಲೋನಿ

ಚಿತ್ರದಲ್ಲಿ ಇಬ್ಬರು ಉಪೇಂದ್ರರು ಇರುವಂತೆಯೇ, ಚಿತ್ರದಲ್ಲಿ ಇಬ್ಬರು ನಾಯಕಿಯರೂ ಇದ್ದಾರೆ. ಒಬ್ಟಾಕೆ ಸಲೋನಿ. ಇನ್ನೊಬ್ಟಾಕೆ ರಾಗಿಣಿ. ಈ ಪೈಕಿ ಸಲೋನಿ ಪಕ್ಕಾ ಅಗ್ರಹಾರದ ಹುಡುಗಿಯಾಗಿ ಕಾಣಿಸಿಕೊಂಡರೆ, ರಾಗಿಣಿ ಅಲ್ಟ್ರಾ ಮಾಡರ್ನ್ ಹುಡುಗಿಯಾಗಿ ಮಿಂಚುತ್ತಿದ್ದಾರೆ.

ಸಲೋನಿ ಮತ್ತು ರಾಗಿಣಿ ಇಬ್ಬರಿಗೂ ಉಪೇಂದ್ರ ಹೊಸಬರಲ್ಲ. ಈ ಹಿಂದೆ 'ಬುದ್ಧಿವಂತ' ಚಿತ್ರದಲ್ಲಿ ಸಲೋನಿ, ಉಪೇಂದ್ರರ ಒನ್‌ ಆಫ್ ದಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆ ನಂತರ 'ದುಬೈ ಬಾಬು' ಚಿತ್ರದಲ್ಲೂ ಉಪೇಂದ್ರ ಮತ್ತು ಸಲೋನಿ ನಟಿಸಿದ್ದರು. 'ಶಿವಂ' ಅವರಿಬ್ಬರ ಮೂರನೆಯ ಚಿತ್ರ. ಇನ್ನು ರಾಗಿಣಿ, ಇದಕ್ಕೂ ಮುನ್ನ ಉಪೇಂದ್ರರ ಜೊತೆಗೆ 'ಆರಕ್ಷಕ' ಚಿತ್ರದಲ್ಲಿ ಅಭಿನಯಿಸಿದ್ದರು. 'ಶಿವಂ' ಅವರಿಬ್ಬರ ಎರಡನೆಯ ಚಿತ್ರ.


ಶಿವಂ ಬಗ್ಗೆ ಖುಷಿ ಇದೆ - ಸಿ.ಆರ್‌. ಮನೋಹರ್‌

'ಒರಟ - ಐ ಲವ್‌ ಯು' ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಡಾ.ಸಿ.ಆರ್‌. ಮನೋಹರ್‌, ನಂತರದ ದಿನಗಳಲ್ಲಿ 'ಜನುಮದ ಗೆಳತಿ', 'ಸ್ಕೂಲ್‌ ಮಾಸ್ಟರ್‌' ಮುಂತಾದ ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕಳೆದೆರೆಡು ವರ್ಷಗಳಿಂದ, ಚಿತ್ರರಂಗದಿಂದ ದೂರವೇ ಇದ್ದ ಅವರು, ಇದೀಗ ತಮ್ಮ ಮಗಳು ತನ್ವಿ ಹೆಸರಿನಲ್ಲಿ 'ತನ್ವಿ ಫಿಲಂಸ್‌' ಬ್ಯಾನರ್‌ ಹುಟ್ಟುಹಾಕಿ, ಆ ಮೂಲಕ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ಶಿವಂ' ಚಿತ್ರದ ಬಗ್ಗೆ ನಿರ್ಮಾಪಕ ಸಿ.ಆರ್‌.ಮನೋಹರ್‌ 'ಶಿವಂ' ಬಗ್ಗೆ ಖುಷಿಯಾಗಿದ್ದಾರೆ. ಒಂದು ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. 'ನಾನು ತುಂಬಾ ಇಷ್ಟಪಟ್ಟ ಕಥೆ ಇದು. ಉಪೇಂದ್ರ ಅವರ ಜೊತೆ ಕೆಲಸ ಮಾಡಿದ್ದು ಖುಷಿಯ ವಿಚಾರ. ಅವರು ನಾನು ಅಣ್ಣ-ತಮ್ಮನ ತರಹ. ಅವರ ಜೊತೆ ಇನ್ನೂ 10 ಸಿನಿಮಾ ಬೇಕಾದರೂ ಮಾಡುತ್ತೇನೆ. ತುಂಬಾ ಸರಳ ವ್ಯಕ್ತಿ. ಅವರ ಜೊತೆ ಕೆಲಸ ಮಾಡೋದು ಕೂಡಾ ಸುಲಭ' ಎಂದು ಹೇಳುತ್ತಾರೆ ಸಿ.ಆರ್‌.ಮನೋಹರ್‌.

No comments:

Post a Comment