Pages

Wednesday, August 8, 2012

ತೆಲುಗು ಜುಲಾಯಿಗೆ ಉಪ್ಪಿ ಗಾಡ್ ಫಾದರ್ ಬಲಿ

ಆಕ್ಷನ್ ಹೀರೋ ಅಲ್ಲು ಅರ್ಜುನ್ ಹಾಗೂ ಮೋಹಕ ತಾರೆ ಇಲಿಯಾನಾ ಅಭಿನಯದ ಭಾರಿ ಬಜೆಟ್ ತೆಲುಗು ಚಿತ್ರ 'ಜುಲಾಯಿ' (ಉಡಾಳ, ಉಂಡಾಡಿ ಪುಂಡ) ಆ.9ರ ಗುರುವಾರ ಆಂಧ್ರ ಸೇರಿದಂತೆ ಕರ್ನಾಟಕದಲ್ಲೂ ತೆರೆಕಾಣುತ್ತಿದೆ. ವಿಷಯ ಇದಲ್ಲ. ಉಪೇಂದ್ರ ಅಭಿನಯದ 'ಗಾಡ್ ಫಾದರ್' ಚಿತ್ರ ಎತ್ತಂಗಡಿಯಾಗುತ್ತಿದೆ.

ಈ ಸಂಬಂಧ ಚಿತ್ರದ ನಿರ್ಮಾಪಕ ಕೆ.ಮಂಜು ಅವರು ಸಿಡಿದೆದಿದ್ದಾರೆ. ತಮ್ಮ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೂ ಎತ್ತಂಗಡಿ ಮಾಡುತ್ತಿರುವ ಬಗ್ಗೆ ಕಿಡಿಕಿಡಿಯಾಗಿದ್ದಾರೆ. ಜುಲಾಯಿ ವಿರುದ್ಧ ಫಿಲಂ ಚೇಂಬರ್ ಮೆಟ್ಟಿಲನ್ನೂ ಹೇರಿದ್ದಾರೆ.

ಯಾವುದೇ ಕಾರಣಕ್ಕೂ ತಮ್ಮ ಗಾಡ್ ಫಾದರ್ ಚಿತ್ರಕ್ಕೆ ಅನ್ಯಾಯವಾಗಲು ಬಿಡಲ್ಲ ಎಂದಿರುವ ಅವರು ಚಿತ್ರಮಂದಿರದ ಮಾಲೀಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡಿನಲ್ಲೇ ಕನ್ನಡ ಚಿತ್ರಗಳಿಗೆ ಉಳಿಗಾಲವಿಲ್ಲ ಎಂದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ಗಾಡ್ ಫಾದರ್ ಚಿತ್ರದ ವಿತರಕ ಪ್ರಸಾದ್ ಮಾತನಾಡುತ್ತಾ, ತಮ್ಮ ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕದ ಜನ ಆಶೀರ್ವದಿಸಿದ್ದಾರೆ. ಉತ್ತಮ ವಿಮರ್ಶೆಗೂ ಪಾತ್ರವಾಗಿದೆ. ಆದರೂ ಪರಭಾಷಾ ಚಿತ್ರಕ್ಕಾಗಿ ತಮ್ಮ ಚಿತ್ರವನ್ನು ಬಲಿಕೊಡುತ್ತಿದ್ದಾರೆ ಎಂದಿದ್ದಾರೆ.

ಯಶಸ್ವಿ 13ನೇ ದಿನಕ್ಕೆ ಕಾಲಿಟ್ಟಿರುವ 'ಗಾಡ್ ಫಾದರ್' ಕಲೆಕ್ಷನ್ ಏನೂ ಡೌನ್ ಆಗಿಲ್ಲ. ಬಾಕ್ಸಾಫೀಸಲ್ಲಿ ಮಾಡರೇಟ್ ಆಗಿ ಬಿಜಿನೆಸ್ ಮಾಡುತ್ತಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನೋತ್ಸವ, ಬಳಿಕ ರಂಜಾನ್ ಹಬ್ಬವಿದೆ. ಈ ಸಾಲು ಸಾಲು ರಜೆಗಳಿಂದ ಬಿಜಿನೆಸ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಆದರೂ ಚಿತ್ರವನ್ನು ಎತ್ತಂಗಡಿ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಬಗ್ಗೆ ತಾವು ಫಿಲಂ ಚೇಂಬರ್ ಗೆ ದೂರು ನೀಡುತ್ತಿದ್ದೇವೆ. ಕೆಲವು ಪಟ್ಟಭದ್ರ ಹಿತಾಸಕ್ತರ ಕಾರಣ ಕನ್ನಡ ಚಿತ್ರಗಳ ಪರಿಸ್ಥಿತಿ ಹೀಗಾಗಿದೆ. ಇದು ಹೀಗೇ ಮುಂದುವರಿದರೆ ಕನ್ನಡ ಚಿತ್ರಗಳ ಪರಿಸ್ಥಿತಿ ಅಧೋಗತಿ ಎಂದಿದ್ದಾರೆ ಪ್ರಸಾದ್.

No comments:

Post a Comment