Pages

Thursday, August 23, 2012

ಉಪೇಂದ್ರ, ಓಂ ಪ್ರಕಾಶ್ ರಾವ್ 'ತ್ರಿಮೂರ್ತಿ' ಲೇಟಂತೆ

ಸೂಪರ್ ಸ್ಟಾರ್ ಉಪೇಂದ್ರ ಮತ್ತು ಓಂ ಪ್ರಕಾಶ್ ರಾವ್ ನಿರ್ದೇಶನದ ಚಿತ್ರ 'ತ್ರಿಮೂರ್ತಿ' ಸದ್ಯದಲ್ಲೇ ಬರಲಿದೆ ಎಂಬ ಮಾತು ಗಾಂಧಿನಗರದಲ್ಲಿ ಸುತ್ತಾಡುತ್ತಿತ್ತು. ಆದರೆ 'ಸದ್ಯದಲ್ಲೇ' ಎಂಬ ಮಾತು ಈಗ 'ಸುಳ್ಳು' ಎನ್ನಲಾಗುತ್ತಿದೆ. ಕಾರಣ, ಸೆಪ್ಟೆಂಬರ್ 18ನೇ ತಾರೀಖು ಉಪೇಂದ್ರ ಹುಟ್ಟುಹಬ್ಬವಿದೆ. ಆ ದಿನವೇ ಅವರು ನಿರ್ದೇಶಿಸಲಿರುವ ಹೊಸ ಚಿತ್ರದ ಮುಹೂರ್ತ ನೆರವೇರಲಿದೆ ಎಂಬ ಮಾತು ಎಲ್ಲೆಡೆ ಹಬ್ಬಿದೆ. ಹೀಗಿರುವಾಗ ಓಂ ಹಾಗೂ ಉಪ್ಪಿ ಸಂಗಮದ ಚಿತ್ರ ಈಗಲೇ ಪ್ರಾರಂಭವಾಗುವುದು ಹೇಗೆ?

ಈ ಸಂದೇಹಕ್ಕೆ ಪುಷ್ಟಿ ಕೊಡುವ ಸಾಕಷ್ಟು ಅಂಶಗಳಿವೆ. ಉಪೇಂದ್ರ ಈಗಾಗಲೇ ಒಪ್ಪಿ ಅಭಿನಯಿಸುತ್ತಿರುವ 'ಕಲ್ಪನಾ' ಹಾಗೂ 'ಟೋಪಿವಾಲಾ' ಚಿತ್ರಗಳು ಮುಗಿಯಲು ಇನ್ನೂ ಸಾಕಷ್ಟು ಕಾಲ ಬೇಕು. ಆ ಚಿತ್ರಗಳನ್ನು ತರಾತುರಿಯಲ್ಲಿ ಮುಗಿಸುತ್ತಿರುವ ಉಪೇಂದ್ರ, ತಮ್ಮ ಸ್ವಂತ ಬ್ಯಾನರ್ ನಲ್ಲಿ ಬರಲಿರುವ ಚಿತ್ರದ ಕಥೆ ಹಾಗೂ ಚಿತ್ರಕಥೆಯನ್ನು ಈಗಾಗಲೇ ಸಿದ್ಧಪಡಿಸಿಕೊಂಡು ನಿರ್ದೇಶನಕ್ಕೆ ಅಣಿಯಾಗಿದ್ದಾರೆ.

ತಮ್ಮ ಬ್ಯಾನರ್ ನಲ್ಲಿ ಪ್ರಾರಂಭವಾಗಲಿರುವ ಹೊಸ ಚಿತ್ರದ ಬಗ್ಗೆ ಮಾತನಾಡಿರುವ ಉಪೇಂದ್ರ ಅದು ಸದ್ಯದಲ್ಲೇ ಬರುವುದು ಪಕ್ಕಾ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದರೆ, ತಾವು ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ನಟಿಸುವ ಬಗ್ಗೆ ಎಲ್ಲಿಯೂ ಬಹಿರಂಗ ಹೇಳಿಕೆಯನ್ನು ಉಪೇಂದ್ರ ನೀಡಿಯೇ ಇರಲಿಲ್ಲ. ಈ ಬಗ್ಗೆ ಕೇಳಿದರೆ ಉಪೇಂದ್ರ ಕಡೆಯಿಂದ ಬರುತ್ತಿರುವ ಉತ್ತರ ಕೂಡ ಸಂದೇಹಕ್ಕೆ ಆಸ್ಪದ ನೀಡುವಂತಿದೆ.

"ತ್ರಿಮೂರ್ತಿ ಸಿನಿಮಾದ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಬೇಗನೆ ಸುದ್ದಿಯಾಗಿಬಿಟ್ಟಿದೆ. ಆದರೆ, ನಮ್ಮಿಬ್ಬರಿಗೂ ಒಪ್ಪಿಗೆಯಾಗುವ ಕಥೆಯಿನ್ನೂ ಸಿಕ್ಕಿಲ್ಲ. ನಾವಿಬ್ಬರೂ ಒಟ್ಟಾಗಿ ಚಿತ್ರವನ್ನು ಮಾಡುವುದು ನಿಜ. ಆದರೆ, ಅದಕ್ಕಿನ್ನೂ ಸಾಕಷ್ಟು ಸಮಯವಿದೆ. ಅದಕ್ಕೂ ಮೊದಲು ನನ್ನ ನಿರ್ದೇಶನದ ಚಿತ್ರ ಮುಗಿಯಬೇಕಿದೆ. ಹೀಗಾಗಿ ಈಗಲೇ ತ್ರಿಮೂರ್ತಿ ಬಗ್ಗೆ ಮಾತನಾಡುವುದು ತೀರಾ ಮುಂಚಿತವಾಗುತ್ತದೆ" ಎಂದಿದ್ದಾರೆ ಉಪೇಂದ್ರ.

ಈ ಕುರಿತು ಓಂ ಪ್ರಕಾಶ್ ರಾವ್ "ನನ್ನ ಹಾಗೂ ಉಪೇಂದ್ರ ಸಂಗಮದ ಚಿತ್ರಕ್ಕೆ ಕಥೆ ಇನ್ನೂ ಸಿದ್ಧವಾಗಬೇಕಿದೆ. ಆದರೆ ಅದಕ್ಕೂ ಮೊದಲು ಅವರ ಬ್ಯಾನರ್ ನಲ್ಲಿ ಚಿತ್ರ ಬಂದರೆ ನನಗೆ ಸಂತೋಷವೆ. ಏಕೆಂದರೆ ಉಪೇಂದ್ರ ಅವರೊಬ್ಬ ಕನ್ನಡದ ಅದ್ಭುತ ನಟ ಹಾಗೂ ತಂತ್ರಜ್ಞರು. ಅವರ ಚಿತ್ರ ಬೇರೆಯಲ್ಲ, ನನ್ನ ಚಿತ್ರ ಬೇರೆಯಲ್ಲ. ಅವರ ಚಿತ್ರ ಮುಗಿದ ನಂತರವೇ ನಾವಿಬ್ಬರೂ ಸೇರಿ ಒಟ್ಟಾಗಿ ಚಿತ್ರ ಮಾಡಬಹುದು" ಎಂದು ನಮ್ಮ 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

No comments:

Post a Comment