Pages

Wednesday, July 4, 2012

ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಕೆಂದಾವರೆ ತಾಪಸಿ

ನೋಡುಗರನ್ನು ಮಂತ್ರಮುಗ್ಧಗೊಳಿಸುವ ಸ್ನಿಗ್ಧ ಸೌಂದರ್ಯ. ಈಗಾಗಲೆ ತೆಲುಗಿನಲ್ಲಿ 'ಜುಮ್ಮಂದಿ ನಾದಂ' ಚಿತ್ರದ ಮೂಲಕ ಪಡ್ಡೆಗಳ ಮೈ ಝುಂ ಎನ್ನಿಸಿದ ಬೆಡಗಿ ತಾಪಸಿ ಪನ್ನು. ನೋಟದಾಗೆ ನಗೆಯ ಮೀಟಿ ಮೋಜಿನಾಗೆ ಎಲ್ಲೆಯ ದಾಟಿಸುವ ತಾಪಸಿ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ.

ಈ ಮಾಡೆಲಿಂಗ್ ಬೆಡಗಿ ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈಗಾಗಲೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿಕೊಂಡು ಬಂದಿರುವ ತಾಪಸಿ ಕನ್ನಡಕ್ಕೆ ಆಗಮಿಸುವ ಮೂಲಕ ಪಂಚಭಾಷಾ ತಾರೆ ಎನ್ನಿಸಿಕೊಳ್ಳುತ್ತಿದ್ದಾರೆ

ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿರುವ ತಾಪಸಿ ಕನ್ನಡದಲ್ಲಿ ಉಪೇಂದ್ರ ಜೊತೆ 'ತ್ರಿವಿಕ್ರಮ' ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಯಾವುದಕ್ಕೂ ಮುಹೂರ್ತ ಕೂಡಿಬಂದರೆ ಆಗಸ್ಟ್ ನಲ್ಲಿ ಈ ಚಿತ್ರ ಗ್ಯಾರಂಟಿಯಾಗಿ ಸೆಟ್ಟೇರುತ್ತಂತೆ.

ಇಡೀ ಬೆಂಗಳೂರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೋರಾಡುವ ವ್ಯಕ್ತಿಯೊಬ್ಬನ ಸುತ್ತ ಕತೆ ಗಿರಿಕಿ ಹೊಡೆಯುತ್ತದೆ. ಕೆಲವೊಂದು ಮಾಸ್ ಅಂಶಗಳ ಜೊತೆಗೆ ಒಂದಷ್ಟು ಪ್ರೀತಿ ಪ್ರೇಮ ಪ್ರಣಯಕ್ಕೂ ಜಾಗ ನೀಡಲಾಗಿದೆಯಂತೆ. ಚಿತ್ರದ ಉಳಿದ ತಾಂತ್ರಿಕ ವರ್ಗ ಹಾಗೂ ತಾರಾಬಳಗದ ವಿವರಗಳು ಸದ್ಯಕ್ಕೆ ಸಸ್ಪೆನ್ಸ್.

ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವವರು ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್. ನಿರ್ದೇಶಕರೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂಬುದು ವಿಶೇಷಗಳಲ್ಲಿ ವಿಶೇಷ. ಸದ್ಯಕ್ಕೆ 'ಶಿವ' ಚಿತ್ರದಲ್ಲಿ ಓಂ ಪ್ರಕಾಶ್ ರಾವ್ ಬಿಜಿಯಾಗಿದ್ದಾರೆ. ಅತ್ತ ಉಪೇಂದ್ರ ಅವರು 'ಟೋಪಿವಾಲ' ಮುಗಿಸಬೇಕಾಗಿದೆ. ಆ ಬಳಿಕವಷ್ಟ್ಟೇ 'ತ್ರಿವಿಕ್ರಮ'ನ ಹೋರಾಟ ಎನ್ನುತ್ತವೆ ಗಾಂಧಿನಗರದ ಮೂಲಗಳು.

ತೆಲುಗಿನಲ್ಲಿ ಈಕೆ ಅಭಿನಯಿಸಿದ 'ಮಿ.ಪರ್ಫೆಕ್ಟ್ ' ಸಕ್ಸಸ್ ಆದ ಬಳಿಕ ತಾಪಸಿ ಸಂಭಾವನೆ ದಿಢೀರ್ ಎಂದು ಏರಿಕೆಯಾಗಿತ್ತು. ರು.38 ರಿಂದ ರು.42 ಲಕ್ಷಕ್ಕೆ ಹೊಂದಿಕೊಳ್ಳುತ್ತಿದ್ದ ತಾಪಸಿ ಏಕ್ ದಮ್ ರು.60 ಲಕ್ಷಕ್ಕೆ ಜಿಗಿದರು. ಸಂಭಾವನೆ ರೂಪದಲ್ಲಿ ರು.50 ಲಕ್ಷ ತೆಗೆದುಕೊಂಡರೆ ಉಳಿದ ರು.10 ಲಕ್ಷ ಹೋಟೆಲ್ ಖರ್ಚುವೆಚ್ಚಕ್ಕೆ ಸಮರ್ಪಯಾಮಿ!ಜಿಮ್ಮು ಗಿಮ್ಮು ಕಸರತ್ತು ಅಂತ ಏನೂ ಮಾಡದಿದ್ದರೂ ತಮ್ಮ ಸೊಂಟದ ಸುತ್ತಳತೆಯಲ್ಲಿ ಮಾತ್ರ ಬಳ್ಳಿಯಷ್ಟೂ ಬದಲಾವಣೆ ಆಗಿಲ್ಲ. ಫಿಟ್ ನೆಸ್ ವಿಚಾರದಲ್ಲಿ ಪರ್ಫೆಕ್ಟ್. ಮುಂಬೈನಿಂದ ಕೇರಳಕ್ಕೆ ಅಲ್ಲಿಂದ ಪಾಂಡಿಚೆರಿ, ಬಾದಾಮಿ, ಗೋವಾ ಎಂದು ಜೆಟ್ ಸ್ಪೀಡ್‌ನಲ್ಲಿ ಹಾರಾಡುವುದೇ ಇದಕ್ಕೆ ಕಾರಣ ಎನ್ನುತ್ತಾರೆ. ಇದೇ ತಮ್ಮ ಫಿಟ್ ನೆಸ್ ಮಂತ್ರ , ಎಲ್ಲಾ ಪ್ರಯಾಣದ ಮಹಿಮೆ ಎನ್ನುತ್ತಾರೆ ಇಪ್ಪತ್ತೈದರ ಪೆಣ್ಣು ತಾಪಸಿ

No comments:

Post a Comment