Pages

Tuesday, July 3, 2012

ಉಪೇಂದ್ರ, ಓಂ ಪ್ರಕಾಶ್ ರಾವ್ ಜೋಡಿಯ ತ್ರಿವಿಕ್ರಮ

ಸೂಪರ್ ಸ್ಟಾರ್ ಉಪೇಂದ್ರರಿಗೂ 'ಓಂ' ಪದಕ್ಕೂ ಭಾರೀ ನಂಟು. ಈ ನಂಟು ಈಗ ಬೇರೊಂದು ರೂಪ ತಾಳಿದೆ. ಸದ್ಯದಲ್ಲೇ ನಟ ಉಪೇಂದ್ರ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಒಟ್ಟಾಗಿ ಚಿತ್ರವೊಂದನ್ನು ಪ್ರಾರಂಭಿಸಲಿದ್ದಾರೆ. ಓಂ ಪ್ರಕಾಶ್ ರಾವ್ ಈ ಚಿತ್ರವನ್ನು ನಿರ್ದೇಶಿಸಲಿದ್ದು ಉಪೇಂದ್ರ ನಾಯಕರಾಗಿ ನಟಿಸಲಿದ್ದಾರೆ.

ಶಿವರಾಜ್ ಕುಮಾರ್ ನಾಯಕತ್ವ ಹಾಗೂ ಉಪೇಂದ್ರ ನಿರ್ದೇಶನದ 'ಓಂ' ಚಿತ್ರ ಇವತ್ತಿಗೂ ಹೆಸರುವಾಸಿ. ಹಾಕಿರುವ ಹೊಸ ಚಿತ್ರ ಓಡದಿದ್ದರೆ ಆ ಜಾಗಕ್ಕೆ 'ಓಂ' ಪ್ರತ್ಯಕ್ಷವಾಗುವುದು ಎಲ್ಲಾ ಕಡೆ ಸರ್ವೇಸಾಮಾನ್ಯ. ಅಷ್ಟರಮಟ್ಟಿಗೆ ಅದು ಥಿಯೇಟರ್ ಮಾಲೀಕರಿಗೆ ಆಪದ್ಬಾಂಧವ. ಓಂ ಕನ್ನಡ ಚಿತ್ರರಂಗದ ಅಜರಾಮರ ಆಸ್ತಿ ಎಂಬುದು ನಿರ್ವಿವಾದ.

ಹೀಗಾಗಿಯೋ ಏನೋ, 'ಓಂ' ಚಿತ್ರ ನಿರ್ದೇಶಿಸಿದ ನಂತರ ಉಪೇಂದ್ರ, 'ಓಂಕಾರ' ಹೆಸರಿನ ಚಿತ್ರದಲ್ಲಿ ನಟಿಸಿದ್ದರು. ಅದು ಸೂಪರ್ ಹಿಟ್ ಎನಿಸಿದಿದ್ದರೂ ಹಾಕಿದ ದುಡ್ಡಿಗೆ ಮೋಸವಾಗಲಿಲ್ಲ. ಈಗ ಮತ್ತೆ 'ಓಂ'ಕಾರದ ಬೆನ್ನುಬಿದ್ದಿದ್ದಾರೆ ಉಪೇಂದ್ರ ಅಂದುಕೊಳ್ಳಬೇಡಿ. ಅವರೀಗ ಓಂ ಪ್ರಕಾಶ್ ರಾವ್ ಹೆಸರಿನ ಖ್ಯಾತ ನಿರ್ದೇಶಕರಿಗೆ ನಟನಾಗಿ ಸಾಥ್ ನೀಡಲಿದ್ದಾರೆ.

ಇದೊಂಥರಾ ವಿರುದ್ಧ ಧ್ರುವಗಳ ಸಂಗಮವಲ್ಲದಿದ್ದರೂ ವಿಚಿತ್ರ ಬಂಧನ. ಇಬ್ಬರೂ ಮಾಸ್‌ ಪ್ರೇಕ್ಷಕರ ಪ್ರಭುಗಳೇ ಆದರೂ ಇವರಿಬ್ಬರಲ್ಲಿ ಸಾಕಷ್ಟು ಭಿನ್ನತೆಗಳಿವೆ. ಓಂ ಪ್ರಕಾಶ್ 'ಹೊಡಿಬಡಿ' ಚಿತ್ರಗಳ ನಿರ್ದೇಶಕರಾದರೆ ಉಪೇಂದ್ರ ಯಾವುದೇ ಒಂದು ಕೆಟಗರಿಯಲ್ಲಿ ಮಾತ್ರ ಗುರುತಿಸಿಕೊಂಡವರಲ್ಲ. ಅವರು ಕ್ರಿಯೆಟಿವ್ ನಿರ್ದೇಶಕ ಪಟ್ಟ ಗಿಟ್ಟಿಸಿಕೊಂಡವರು.

ಬಂದಿರುವ ಮಾಹಿತಿ ಪ್ರಕಾರ, ಇವರಿಬ್ಬರ ಕಾಂಬಿನೇಷನ್ ಚಿತ್ರದ ಹೆಸರು 'ತ್ರಿವಿಕ್ರಮ'. ನೆರೆಭಾಷೆಗಳಾಗ ತಮಿಳು, ತೆಲುಗಿನಲ್ಲಿ ಖ್ಯಾತಳಾಗಿರುವ ನಟಿ 'ತಪಸಿ' ಈ ಚಿತ್ರಕ್ಕೆ ನಾಯಕಿ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಸ್ವತಃ ಓಂ ಪ್ರಕಾಶ್ ರಾವ್ ಇದನ್ನು ನಿರ್ಮಿಸಲಿದ್ದಾರೆ. ಓಂ ಜೊತೆ ಗೋಪಿಚಂದ್ ದಾಂಡೇಲಿ ಎಂಬವರೂ ಕೂಡ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ.

ಸಂಪೂರ್ಣ ಬೆಂಗಳೂರನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಒಬ್ಬ ವ್ಯಕ್ತಿಯ ಕಥೆಯನ್ನು ಈ ಚಿತ್ರಕ್ಕಾಗಿ ರೆಡಿ ಮಾಡಿದ್ದಾರಂತೆ ಓಂ ಪ್ರಕಾಶ್ ರಾವ್. ಜೊತೆಗೆ ಪ್ರೀತಿ-ಪ್ರಣಯ, ದೇಶಪ್ರೇಮಕ್ಕೂ ಈ ಕಥೆಯಲ್ಲಿ ಜಾಗವಿದೆಯಂತೆ. ಚಿತ್ರಕ್ಕೆ ಎಂ.ಎಸ್. ರಮೇಶ್ ಸಂಭಾಷಣೆ ಬರೆಯಲಿದ್ದು ಮಿಕ್ಕ ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಸದ್ಯಕ್ಕೆ ಉಪೇಂದ್ರ, 'ಕಲ್ಪನಾ' ಮತ್ತು 'ಟೋಪಿವಾಲಾ' ಚಿತ್ರಗಳಲ್ಲಿ ಬಿಜಿ. ನಂತರ 'ತ್ರಿವಿಕ್ರಮ' ಶುರು.ಉಪ್ಪಿ-ಓಂ ಸಂಗಮದ ಈ ಚಿತ್ರದ ಮುಹೂರ್ತಕ್ಕೆ ತೆಲುಗಿನ ಖ್ಯಾತ ಸ್ಟಾರ್ ನಾಗಾರ್ಜುನ ಬರಲಿದ್ದಾರೆಂಬುದು ವಿಶೇಷ. ಇದಕ್ಕೆ ನಾಗಾರ್ಜುನ ಸಂತೋಷದಿಂದ ಒಪ್ಪಿದ್ದಾರಂತೆ. ಮುಹೂರ್ತವೇನೂ ದೂರವಿಲ್ಲ, ಮುಂದಿನ ತಿಂಗಳು, ಅಂದರೆ ಆಗಸ್ಟ್ 2012ರ ಮೊದಲನೇ ವಾರದಲ್ಲಿ. ಉಪೇಂದ್ರ-ಓಂ ಪ್ರಕಾಶ್ ರಾವ್ ಜಾದೂ ನೋಡಲು ಸಿದ್ಧರಾಗಿ.

No comments:

Post a Comment