Pages

Sunday, June 3, 2012

ಬೆಂಗಳೂರಿಗೆ 'ಗಾಡ್ ಫಾದರ್' ಎ ಆರ್ ರೆಹಮಾನ್





ಡಬಲ್ ಆಸ್ಕರ್ ಪ್ರಶಸ್ತಿ ಪಡೆದ, ನಾಲ್ಕು ವಿದೇಶಗಳಿಂದ ಡಾಕ್ಟರೇಟ್ ಗೌರವ ಪಡೆದ, ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಬೆಂಗಳೂರಿಗೆ ಬಂದಿದ್ದರು. ನಿಜವಾಗಿಯೂ ಬಂದಿದ್ದರು. ಕನ್ನಡದ 'ಗಾಡ್ ಫಾದರ್' ಚಿತ್ರಕ್ಕೆ ಸಂಗೀತ ನೀಡಿರುವ ರೆಹಮಾನ್, ಆ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದರು.

ಶನಿವಾರ, ಮೇ 02, 2012 ರಂದು ಬೆಂಗಳೂರಿಗೆ ಆಗಮಿಸಿ ಅಚ್ಚಕನ್ನಡದಲ್ಲಿ ಸ್ವಚ್ಛವಾಗಿ 'ನಮಸ್ತೇ... ಚೆನ್ನಾಗಿದ್ದೀರಾ?" ಎಂದು ಮಾತಿನಾಡಿ ಎಲ್ಲರ ಹುಬ್ಬೇರಿಸಿದರು ರೆಹಮಾನ್. ಅವರು ಕನ್ನಡ ಚಿತ್ರವೊಂದಕ್ಕೆ ಸಂಗೀತ ನೀಡಿರುವುದೇ ದೊಡ್ಡ ವಿಷಯ. ಅಷ್ಟೇ ಅಲ್ಲದೇ ಆಡಿಯೋ ಬಿಡುಗಡೆಗೆ ಸ್ವತಃ ಬೆಂಗಳೂರಿಗೆ ಬಂದಿದ್ದು ತೀರಾ ವಿಶೇಷ.

"ನಾನು ಅದೆಷ್ಟೋ ವಿದೇಶಗಳನ್ನು ಸುತ್ತಿದ್ದೇನೆ. ಎಲ್ಲೆಡೆಯಲ್ಲೂ ಕನ್ನಡದ ಅಭಿಮಾನಿಗಳಿದ್ದಾರೆ. ಇಷ್ಟು ದಿನ ಹಿಂದಿ, ತಮಿಳು ಚಿತ್ರಗಳ ಗೀತೆಗಳನ್ನು ಹಾಡಿ ಜನರ ಮನಸ್ಸನ್ನು ರಂಜಿಸುತ್ತಿದ್ದೆ. ಆದರೆ ಇನ್ಮುಂದೆ ಅಲ್ಲಿ ಯಾವುದೇ ದೇಶಕ್ಕೆ ಹೋದರೂ ಕನ್ನಡದ ಹಾಡನ್ನೂ ಹಾಡುತ್ತೇನೆ" ಎಂದರು ಎ ಆರ್ ರೆಹಮಾನ್

ಮುಂದುವರಿದ ರೆಹಮಾನ್, "ಸಂಗೀತ ದಿಗ್ಗಜರಾದ ವಿಜಯಭಾಸ್ಕರ್, ವೆಂಕಟೇಶ್, ಹಂಸಲೇಖಾ ಹಾಗೂ ವಿಜಯಾನಂದ ಇವರೊಂದಿಗೆ ಚೆನ್ನೈಲಿದ್ದಾಗ ಕೆಲಸ ಮಾಡಿದ್ದೇನೆ. ಅದು ನಾನು ಎಂದೂ ಮರೆಯಲಾರದ ಅನುಭವ. ಬೆಂಗಳೂರಿನಲ್ಲೂ ಸಾಕಷ್ಟು ದಿನ ಸಂಗೀತ ಕೆಲಸ ಮಾಡಿದ್ದೇನೆ.

ಆಗಿನಿಂದಲೂ ನನಗೆ ಕನ್ನಡ ಚಿತ್ರಕ್ಕೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದು ಈಗ 'ಗಾಡ್ ಫಾದರ್' ಚಿತ್ರದ ಮೂಲಕ ಈಡೇರಿದೆ. ಕನ್ನಡ ಭಾಷೆ ಹಾಗೂ ಕನ್ನಡ ಚಿತ್ರಗಳ ಗೀತೆಗಳ ಬಗ್ಗೆ ಸಾಕಷ್ಟು ಮೆಚ್ಚಿ ಮಾತನಾಡಿದರು ರೆಹಮಾನ್, ಅವರ ಬಾಯಿಂದ ಕನ್ನಡದ ಗುಣಗಾನ ನಡೆಯುತ್ತಿದ್ದರೆ ಅಲ್ಲಿ ನೆರೆದಿದ್ದ ಗಣ್ಯರನ್ನೂ ಸೇರಿ ಎಲ್ಲರೂ ಸ್ತಬ್ಧಚಿತ್ರಗಳಾಗಿದ್ದರು.

25 ಬಾರಿ ಫಿಲಂ ಫೇರ್ ಪ್ರಶಸ್ತಿ ಪಡೆದ ಈ ಸಂಗೀತ ದಿಗ್ಗಜ ಎ ಆರ್ ರೆಹಮಾನ್ ಅವರಿಗೆ ಕನ್ನಡ ಚಿತ್ರರಂಗದ ಪರವಾಗಿ 'ಗಾಡ್ ಫಾದರ್' ಚಿತ್ರತಂಡ ಮೈಸೂರು ಪೇಟ ತೊಡಿಸಿ ಸನ್ಮಾನಿಸಿತು. ಶ್ರೀಗಂಧದ ನಾಡಿನ ಗಂಧನ ಮಾಲೆಯನ್ನು ಅವರ ಕೊರಳಿಗೆ ತೊಡಿಸಿ ಧನ್ಯವಾಯಿತು ಚಿತ್ರತಂಡ. ಅಂದಹಾಗೆ, ಈ ಗಾಡ್ ಫಾದರ್ ಚಿತ್ರದ ನಿರ್ಮಾಪಕ ಕೆ ಮಂಜು.

ಈ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಹಿರಿಯ ನಟ ಅಂಬರೀಷ್, ಸುಮಲತಾ, ದ್ವಾರಕೀಶ್, ನಿರ್ಮಾಪಕ ಕೆ. ಮಂಜು, ನಿರ್ದೇಶಕ ಶ್ರೀರಾಮ್, ಉಪೇಂದ್ರ, ಪ್ರಿಯಾಂಕ, ನಾಯಕಿ ಸೌಂದರ್ಯ ಜಯಮಾಲಾ, ರಮೇಶ್ ಅರವಿಂದ, ಹಂಸಲೇಖ, ವಿ ಮನೋಹರ್, ಗೀತಸಾಹಿತಿಗಳಾದ ಕೆ ಕಲ್ಯಾಣ್, ಕವಿರಾಜ್, ಗಾಯಕ ವಿಜಯ ಪ್ರಕಾಶ್ ಮುಂತಾದವರು ಹಾಜರಿದ್ದರು.

ಒಟ್ಟಿನಲ್ಲಿ ಕೆ ಮಂಜು, ತಮ್ಮ ಸಾರಥ್ಯದ ಗಾಡ್ ಫಾದರ್ ಚಿತ್ರದ ಬಿಡುಗಡೆಗೂ ಮೊದಲೇ ಸಂಗೀತ ದಿಗ್ಗಜ ಎ ಆರ್ ರೆಹಮಾನ್ ಅವರನ್ನು ಬೆಂಗಳೂರಿಗೆ ಕರೆಸಿ ಹೊಸ ಸಾಧನೆ ಮಾಡಿದ್ದಾರೆ. ರೆಹಮಾನ್ ಗಾಡ್ ಫಾದರ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಲ್ಲದೇ ಆಡಿಯೋ ಬಿಡುಗಡೆಗೂ ಕೂಡ ಆಗಮಿಸಿ ಹೊಸ ಸಂಚಲನ ಮೂಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಚಿತ್ರ ಬಿಡುಗಡೆಗೂ ಮೊದಲೇ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

No comments:

Post a Comment