Pages

Monday, May 28, 2012

ಶಿವಣ್ಣನೂ ಇಲ್ಲ, ಪುನೀತೂ ಇಲ್ಲ; ಉಪೇಂದ್ರ-II ಶುರು

ಶಿವರಾಜ್ ಕುಮಾರ್ ನಾಯಕನಾಗಿರುವ ಸಿನಿಮಾವನ್ನು ಉಪೇಂದ್ರ ನಿರ್ದೇಶಿಸುತ್ತಾರಂತೆ. ಶಿವಣ್ಣ, ಪುನೀತ್, ರಾಘಣ್ಣ ಮೂವರೂ ಇರೋ ಚಿತ್ರಕ್ಕೆ ಕಥೆ ರೆಡಿ ಮಾಡ್ತಿದ್ದಾರಂತೆ ಎಂದೆಲ್ಲ ಗಾಳಿಸುದ್ದಿಗಳು ಗಾಂಧಿನಗರದಲ್ಲಿ ಮಾಮೂಲಿಯಾಗಿತ್ತು. ಈಗ ಅವೆಲ್ಲವೂ ಸುಳ್ಳಾಗಿದೆ. ಉಪ್ಪಿಯೀಗ 'ಉಪೇಂದ್ರ ಭಾಗ 2'ಕ್ಕೆ ಚಾಲನೆ ನೀಡಿದ್ದಾರೆ!

1999ರಲ್ಲಿ ಬಿಡುಗಡೆಯಾಗಿ ಭಾರೀ ಸುದ್ದಿಯೊಂದಿಗೆ ಬಾಕ್ಸಾಫೀಸಿನಲ್ಲಿ ತಾಂಡವವಾಡಿದ ಸಿನಿಮಾ 'ಉಪೇಂದ್ರ'. ಅಲ್ಲಿ ಉಪ್ಪಿಗೆ ಪ್ರೇಮಾ, ರವೀನಾ ಟಂಡನ್ ಮತ್ತು ದಾಮಿನಿ ಮೂವರು ನಾಯಕಿಯರು. ವಿಶಿಷ್ಟ ಕಥೆ, ಪಾತ್ರ ಮತ್ತು ನಿರ್ದೇಶನ ಎಲ್ಲರ ಗಮನ ಸೆಳೆದಿತ್ತು.

ಈಗ ಅದೇ 'ಉಪೇಂದ್ರ' ಚಿತ್ರದ ಮುಂದುವರಿದ ಭಾಗವನ್ನು ಉಪ್ಪಿ ಮಾಡಲು ಹೊರಟಿದ್ದಾರೆ. ಈ ಬಾರಿ ಪ್ರಿಯಾಂಕಾ ಉಪೇಂದ್ರ ಹೊಸ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಉಪೇಂದ್ರ' ಚಿತ್ರದ ಹಾಡುಗಳಿಂದ ಭಾರೀ ಜನಪ್ರಿಯರಾದ ಗುರುಕಿರಣ್ ಇಲ್ಲೂ ಇದ್ದಾರೆ. 'ಕಠಾರಿ ವೀರ ಸುರಸುಂದರಾಂಗಿ'ಯಲ್ಲಿ ಮಿಂಚಿದ ಎಚ್.ಸಿ. ವೇಣು (ತಾರಾ ಪತಿ) ಕ್ಯಾಮರಾಮ್ಯಾನ್ ಅನ್ನೋದು ಸದ್ಯ ಬಂದಿರುವ ಅನಧಿಕೃತ ಸುದ್ದಿ.

ಇದೆಲ್ಲ ಸರಿ, ಉಪ್ಪಿಯ ಹೊಸ ಚಿತ್ರಕ್ಕೆ ಯಾರು ನಾಯಕಿ? ಮೊದಲನೇ ಭಾಗದಲ್ಲಿದ್ದಂತೆ ಇಲ್ಲೂ ಮೂವರಿರುತ್ತಾರಾ? ಈ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಕ್ಕಿಲ್ಲ. ನಾಯಕಿ ಸೇರಿದಂತೆ ಇತರ ಪಾತ್ರಗಳ ಆಯ್ಕೆಯನ್ನು ಇನ್ನಷ್ಟೇ ಉಪ್ಪಿ ಮಾಡಬೇಕಿದೆ.

ಹೊಸ ಚಿತ್ರ ನಿರ್ಮಾಣಕ್ಕಾಗಿ ಪ್ರಿಯಾಂಕಾ ಉಪೇಂದ್ರ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸುವುದರೊಂದಿಗೆ ಇದು ಬಯಲಾಗಿದೆ.

ಕಳೆದ ಮೂರು ವರ್ಷಗಳಿಂದ ಕಥೆ ಬರೆಯುತ್ತಿದ್ದ ಉಪೇಂದ್ರ, ಈಗ ಅಂತಿಮ ಟಚ್ ಕೊಡುತ್ತಿದ್ದಾರೆ. ಸಂಭಾಷಣೆಗಳೂ ರೆಡಿಯಾಗುತ್ತಿವೆ. ಹೆಚ್ಚು ಕಡಿಮೆ ಇನ್ನೊಂದು ತಿಂಗಳೊಳಗೆ ಎಲ್ಲವೂ ಅಂತಿಮಗೊಳ್ಳಲಿದ್ದು, ಮುಹೂರ್ತವೂ ನಡೆಯುವ ಸಾಧ್ಯತೆಗಳಿವೆ.

ಮೆಟ್ರೋ ಬೇಕೆಂದಿದ್ದರು...
ಒಂದೂವರೆ ತಿಂಗಳ ಹಿಂದೆ ಉಪ್ಪಿ ತನ್ನ ಹೊಸ ಚಿತ್ರದ ಶೂಟಿಂಗ್‌ಗಾಗಿ ಬೆಂಗಳೂರು ಮೆಟ್ರೋದಲ್ಲಿ ಅವಕಾಶ ನೀಡಬೇಕೆಂದು ಕೇಳಿದ್ದರು. ಆದರೆ ಇದಕ್ಕೆ ಮೆಟ್ರೋದಿಂದ ಒಪ್ಪಿಗೆ ಸಿಕ್ಕಿಲ್ಲ. ನಂತರ ದೆಹಲಿ ಮೆಟ್ರೋದಲ್ಲೂ ಯತ್ನಿಸಿದ್ದಾರೆ. ಇದರಲ್ಲಿ ಯಾವುದು ಫಲ ಕೊಟ್ಟಿದೆ ಅನ್ನೋದೀಗ ಗೊತ್ತಾಗಿಲ್ಲ.

ಚಿತ್ರದಲ್ಲಿ ಚಲಿಸುವ ವಾಹನವೊಂದರಲ್ಲಿ ನಡೆಯುವ ಸನ್ನಿವೇಶಗಳಿವೆ. ಹಾಗಾಗಿ ಮೆಟ್ರೋ ರೈಲಿನಲ್ಲಿ ಶೂಟಿಂಗ್ ಮಾಡಲು ಉಪ್ಪಿ ಬಯಸಿದ್ದರು.

No comments:

Post a Comment