Pages

Wednesday, May 30, 2012

ಉಪೇಂದ್ರ ಪ್ರೊಡಕ್ಷನ್ಸ್ ಆರಂಭ

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಅವರು ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಅವರ ಹೋಂ ಬ್ಯಾನರ್ ಸಂಸ್ಥೆಗೆ ಉಪೇಂದ್ರ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಈ ಸಂಸ್ಥೆಯ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಈ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ಸೆಪ್ಟೆಂಬರ್ 18ಕ್ಕೆ ಸೆಟ್ಟೇರಲಿದೆ. ಅಂದು ಉಪೇಂದ್ರ ಅವರ ಹುಟ್ಟುಹಬ್ಬ. ಹಾಗಾಗಿ ಆ ದಿನವೇ ಚೊಚ್ಚಲ ಚಿತ್ರಕ್ಕೆ ಉಪೇಂದ್ರ ಪ್ರೊಡಕ್ಷನ್ಸ್ ಜನ್ಮ ನೀಡಲಿದೆ. ಸದ್ಯಕ್ಕೆ ಉಪೇಂದ್ರ ಕೂಡ ಕಲ್ಪನಾ ಹಾಗೂ ಟೋಪಿವಾಲಾ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

ಸೆಪ್ಟೆಂಬರ್ ವೇಳೆಗೆ ಈ ಎರಡೂ ಚಿತ್ರಗಳು ಮುಗಿಯಲಿದ್ದು ಉಪ್ಪಿ ನಿರ್ಮಾಣ ಸಂಸ್ಥೆಯ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ. ಈ ಬಗ್ಗೆ ಪ್ರಿಯಾಂಕಾ ಮಾತನಾಡುತ್ತಾ, "ಸದ್ಯಕ್ಕೆ ನಿರ್ಮಾಣ ಸಂಸ್ಥೆಯ ಹೆಸರನ್ನು ನೋಂದಾಯಿಸಿದ್ದೇವೆ. ಇಬ್ಬರೂ ತಮ್ಮದೇ ಆದ ಚಿತ್ರಗಳಲ್ಲಿ ಬಿಜಿಯಾಗಿದ್ದೇವೆ. ಕಿರುತೆಯಲ್ಲೂ ತೊಡಗಿಕೊಂಡಿದ್ದೇವೆ. ಉಪ್ಪಿ ಹುಟ್ಟುಹಬ್ಬಕ್ಕೆ ಆರಂಭವಾಗುತ್ತಿದೆ" ಎಂದಿದ್ದಾರೆ.

ನಟರ ಪತ್ನಿಯರು ನಿರ್ಮಾಪಕಿಯರಾಗಿ ಬದಲಾಗುತ್ತಿರುವುದು ಕನ್ನಡ ಚಿತ್ರರಂಗಕ್ಕೇನು ಹೊಸದಲ್ಲ. ಇಬ್ಬರಿಗೂ ಬೇರೆಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹಾಗಾಗಿ ಇನ್ನೂ ಚೆನ್ನಾಗಿ ಮಾರ್ಕೆಟಿಂಗ್ ಮಾಡಬಹುದು ಎಂದು ಪ್ರಿಯಾಂಕಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆಯ ಚೊಚ್ಚಲನ ಚಿತ್ರವನ್ನು ತಮ್ಮ ಪತಿ ಉಪೇಂದ್ರ ಅವರೇ ನಿರ್ದೇಶಿಸಬೇಕು ಎಂಬುದು ಪ್ರಿಯಾಂಕಾ ಅವರ ಅಭಿಲಾಷೆ. "ಈಗಾಗಲೆ ಉಪೇಂದ್ರ ಅವರು ಚಿತ್ರಕತೆ ಸಿದ್ಧ ಮಾಡಿಕೊಂಡಿದ್ದಾರೆ. ಅದಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದಾರೆ. ನಾನು ಕೂಡ ಕತೆಯೊಂದನ್ನು ಹೆಣೆಯುತ್ತಿದ್ದೇನೆ" ಎನ್ನುತ್ತಾರೆ ಪ್ರಿಯಾಂಕಾ.

ಇದಕ್ಕೆಲ್ಲಾ ಇನ್ನೂ ಸಾಕಷ್ಟು ಸಮಯವಿದೆ. ಅಷ್ಟರೊಳಗೆ ಉಪ್ಪಿ ತಮ್ಮ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ. ಏತನ್ಮಧ್ಯೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗಿನ ಚಿತ್ರ 'ಕ್ರೇಜಿಸ್ಟಾರ್' ( ಅಡಿ ಬರಹ 'ಹೃದಯಗಳ ಸೇತುವೆ') ಮುಗಿಸಿಕೊಡಬೇಕಾಗಿದೆ. ಜೊತೆ ಟಿವಿ ಪ್ರಾಜೆಕ್ಟ್ ಒಂದನ್ನೂ ಮುಗಿಸಬೇಕಾಗಿದೆ.

ಈ ಹಿಂದೆ ಕ್ರೇಜಿಸ್ಟಾರ್ ಜೊತೆ ಪ್ರಿಯಾಂಕಾ ಉಪೇಂದ್ರ ಮಲ್ಲ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ಹಾಟ್ ಹಾಟ್ ಹಾಡುಗಳು ಪಡ್ಡೆಗಳ ನಿದ್ದೆಗೆಡಿಸಿದ್ದವು. "ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ" ಎಂಬ ಹಾಡಂತೂ ಸಖತ್ ಹಿಟ್ ಆಗಿತ್ತು. ಈ ಬಾರಿ ಈ ಜೋಡಿ ಏನು ಇನ್ನೇನು ಮಾಡುತ್ತದೋ ಎಂಬ ಕುತೂಹಲ ಇದ್ದೇ ಇದೆ.

ಇಲ್ಲಿ ಪ್ರಿಯಾಂಕಾ ಉಪೇಂದ್ರ ಬಗ್ಗೆ ಒಂಚೂರು ಹೇಳಲೇಬೇಕಾದ ವಿಷಯವಿದೆ. ಸೀರೆಯಲ್ಲಿ ಸುಂದರವಾಗಿ ಕಾಣುವ ಪ್ರಿಯಾಂಕಾ ಮುಗುಳ್ನಗೆಯೇ ಜೀವಾಳ. ಗಂಡ, ಸಂಸಾರ, ಮಕ್ಕಳು ಎಂದು ಕಳೆದು ಹೋಗದೆ ಮತ್ತೆ ಬಣ್ಣಹಚ್ಚುತ್ತಿರುವುದು ಕೇವಲ ಅಭಿಮಾನಿಗಳ ಪ್ರೀತಿಗಾಗಿ. ಮದುವೆ ಬಳಿಕ ಸಭ್ಯ ಪಾತ್ರಗಳಲ್ಲಷ್ಟೇ ಅಭಿನಯಿಸುತ್ತೇನೆ ಎಂದಿದ್ದಾರೆ ಪ್ರಿಯಾಂಕಾ.

No comments:

Post a Comment