Pages

Friday, May 4, 2012

ಉಪ್ಪಿಯ 'ಉಪೇಂದ್ರ 2'ಗೆ ಸಮೀರಾ ರೆಡ್ಡಿ ಬರ್ತಾರಾ?

ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಈಗಾಗಲೇ ರವೀನಾ ಟಂಡನ್, ಸೋನಾಲಿ ಬೇಂದ್ರೆ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ಸೆಲಿನಾ ಜೇಟ್ಲಿ, ನಯನತಾರಾ ಮುಂತಾದ ಪರಭಾಷಾ ನಾಯಕಿಯರ ಜತೆ ನಟಿಸಿದ್ದಾರೆ. ಇದೀಗ ಕೃಷ್ಣ ಸುಂದರಿ, ಕನ್ನಡದ 'ವರದ ನಾಯಕ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ನಟಿಸುತ್ತಿರುವ ಸಮೀರಾ ರೆಡ್ಡಿಯನ್ನು ತಮ್ಮ ಜೋಡಿಯಾಗಿ ಮುಂದಿನ ಚಿತ್ರಕ್ಕೆ ಕರೆತರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಉಪ್ಪಿ ತಮ್ಮದೇ ನಟನೆ ಹಾಗೂ ನಿರ್ದೇಶನದ 'ಉಪೇಂದ್ರ-2' ಚಿತ್ರಕ್ಕೆ ಸಿದ್ಧತೆ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಕಥೆ-ಚಿತ್ರಕಥೆ ಕೆಲಸವನ್ನೂ ಈಗಾಗಲೇ ಮುಗಿಸಿರುವ ಉಪೇಂದ್ರ ನಾಯಕಿ ಹುಡಕಾಟದಲ್ಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿಯೇ ನಟಿ ಸಮೀರಾ ರೆಡ್ಡಿಯನ್ನು ಭೇಟಿ ಮಾಡಿರುವ ಸಾಧ್ಯತೆಗಳಿವೆ ಎನ್ನುತ್ತಿವೆ ಸುದ್ದಿ ಮೂಲಗಳು. ಆದರೆ ಸಮೀರಾ ಮಾತ್ರ ಈ ವಿಷಯ ಬಾಯಿಬಿಡುತ್ತಿಲ್ಲ.

"ಸಿನಿಮಾದ ಬಗ್ಗೆ ಮಾತನಾಡುವಷ್ಟು ಸಮಯ ನಮ್ಮಲ್ಲಿರಲಿಲ್ಲ. ಇತ್ತೀಚೆಗೆ ಉಪೇಂದ್ರರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದೆ. ತುಂಬಾ ಡೌನ್ ಟು ಅರ್ಥ್ ವ್ಯಕ್ತಿ. ಅವರ ಜತೆ ಸ್ವಲ್ಪ ಹೊತ್ತು ಮಾತನಾಡುವ ಅವಕಾಶ ನನಗೆ ಸಿಕ್ಕಿದ್ದು ಸಂತೋಷ ಕೊಟ್ಟಿದೆ" ಎಂದಿದ್ದಾರೆ. ಉಪ್ಪಿಯ ಜತೆ ನಟಿಸಲಿದ್ದೀರಾ ಎಂಬ ಪ್ರಶ್ನೆಗೆ "ನಮಗೆ ಸಿನಿಮಾಗಳ ಕುರಿತು ಚರ್ಚಿಸುವಷ್ಟು ಕಾಲಾವಕಾಶ ಇರಲಿಲ್ಲ" ಎಂದು ಜಾರಿಕೊಂಡಿದ್ದಾರೆ.

ಕನ್ನಡ ಚಿತ್ರರಂಗವನ್ನು ಮೆಚ್ಚಿ ಮಾತನಾಡಿರುವ ಸಮೀರಾ, "ಇಲ್ಲಿನವರು ಪಕ್ಕಾ ವೃತ್ತಿಪರರು. ನಾನಂತೂ ಇಲ್ಲಿ ಬಂದು ಇದ್ದ ಸಮಯವನ್ನು ಖುಷಿಖುಷಿಯಾಗಿ ಕಳೆದಿದ್ದೇನೆ" ಎಂದಿದ್ದಾರೆ. ಆದರೆ ಉಪ್ಪಿ ಜೊತೆ ಮಾತನಾಡಿದ ಗುಟ್ಟು ಬಿಟ್ಟುಕೊಡದೇ ಸದ್ಯಕ್ಕೆ ಕುತೂಹಲವೇ ಗತಿ ಎನ್ನುವಂತೆಯೂ ಮಾಡಿದ್ದಾರೆ.

No comments:

Post a Comment