Pages

Sunday, April 22, 2012

ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಕೊಬ್ರಿ ಮಂಜು

'ಕಠಾರಿವೀರ ಸುರಸುಂದರಾಂಗಿ' ಹಾಗೂ 'ಗಾಡ್‌ಫಾದರ್' ವಿವಾದ ಮತ್ತೊಂದು ತಿರುವು ಪಡೆದಿದೆ. 'ಗಾಡ್‌ಫಾದರ್' ಚಿತ್ರದ ನಿರ್ಮಾಪಕ ಕೆ ಮಂಜು ಅವರು ತಮಗೆ ನ್ಯಾಯ ಸಿಗದಿದ್ದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಉಪವಾಸ ಸತ್ಯಾಗ್ರಹ ಕೂರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಎರಡೂ ಚಿತ್ರಗಳ ಬಿಡುಗಡೆ ವಿವಾದ ಮತ್ತೊಂದು ಘಟ್ಟ ತಲುಪಿದೆ.

ಇಂದಿನಿಂದಲೇ ಅಂದರೆ, ಶನಿವಾರದಿಂದಲೇ (ಏ.21) ಅವರು ಉಪವಾಸ ಸತ್ಯಾಗ್ರಹ ಕೂರುವುದಾಗಿ ನಿರ್ಧರಿಸಿದ್ದರು. ಆದರೆ ಫಿಲಂ ಚೇಂಬರ್ ಮಧ್ಯಪ್ರವೇಶಿಸಿ ತಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಕಾರಣ ಅವರು ತಮ್ಮ ಮುಷ್ಕರವನ್ನು ವಾಪಸು ಪಡೆದರು.

ಮೊದಲು ಚಿತ್ರೀಕರಣ ಆರಂಭಿಸಿದ್ದು ತಮ್ಮ ಗಾಡ್‌ಫಾದರ್ ಚಿತ್ರ. ದೊಡ್ಡ ತಾರಾಬಳಗವಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಅವರ ಸಂಗೀತವಿದೆ. ತಮ್ಮ ಚಿತ್ರವೇ ಮೊದಲು ಬಿಡುಗಡೆಯಾಗಬೇಕು. ಈ ವಿಚಾರದಲ್ಲಿ ತಮಗೆ ನ್ಯಾಯ ಸಿಗದಿದ್ದರೆ ಸೋಮವಾರ (ಏ.23) ಫಿಲಂ ಚೇಂಬರ್ ಮುಂದೆ ಉಪವಾಸ ಸತ್ಯಾಗ್ರಹ ಕೂರುವುದು ಗ್ಯಾರಂಟಿ ಎಂದರು.

ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಕಡೆಯಿಂದ ಬರುವವರು ಬರಬಹುದು. ಇಲ್ಲದಿದ್ದರೂ ಸಮಸ್ಯೆ ಏನೂ ಇಲ್ಲ, ತಾವೊಬ್ಬರೇ ಕೂರುತ್ತೇವೆ ಎಂದು ಕೊಬ್ರಿ ಮಂಜು ಅವರು ಖಡಕ್ಕಾಗಿ ನುಡಿದ್ದಾರೆ. ಈ ಮೂಲಕ ಮುನಿರತ್ನ ಅವರ 'ಕಠಾರಿವೀರ' ಚಿತ್ರ ಬಿಡುಗಡೆಗೆ ಮತ್ತೊಂದು ವಿಘ್ನ ಎದುರಾಗಿದೆ.

No comments:

Post a Comment