Pages

Tuesday, March 20, 2012

ಏಪ್ರಿಲ್ ನಲ್ಲಿ ಸ್ಟಾರ್ ವಾರ್ - ಪುನೀತ್, ಉಪೇಂದ್ರರಿಗೆ ದಮ್ಮು, ರಚ್ಚಗಳಿಂದ ಪೈಪೋಟಿ

ಸದ್ಯ ಬಹುನಿರೀಕ್ಷಿತ ಚಿತ್ರಗಳಾದ ಪುನೀತ್ ಅಣ್ಣಾಬಾಂಡ್ ಹಾಗೂ ಉಪೇಂದ್ರ ಅಭಿನಯದ 'ಕಠಾರಿವೀರ ಸುರಸುಂದರಾಂಗಿ' ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿವೆ ಎಂಬ ಸುದ್ದಿ ಬಂದಿವೆ. ಅಂದರೆ ಏಪ್ರಿಲ್ 27 ರಂದೇ ಈ ಎರಡೂ ಚಿತ್ರಗಳು ತೆರೆಗೆ ಬರಲಿವೆ. ಆದರೆ ಇತ್ತೀಚಿಗೆ ಪುನೀತ್ ಚಿತ್ರಗಳು ಗುರುವಾರದಂದು ಬಿಡುಗಡೆ ಆಗುತ್ತಿರುವುದರಿಂದ ಅಣ್ಣಾಬಾಂಡ್ 26ಕ್ಕೆ ರಿಲೀಸ್ ಆಗಬಹುದಷ್ಟೇ. ಹೇಗೇ ಆದರೂ ಸ್ಪರ್ಧೆ ಗ್ಯಾರಂಟಿ.

ಅಣ್ಣಾಬಾಂಡ್ ಸೆಟ್ಟೇರಿದ ದಿನದಿಂದಲೂ ಡಾ ರಾಜ್ ಹುಟ್ಟುಹಬ್ಬ, ಏಪ್ರಿಲ್ 24ಕ್ಕೆ ಬಿಡುಗಡೆ ಎಂದೇ ಹೇಳಲಾಗಿತ್ತಾದರೂ ಆ ದಿನವೇ ಎರಡು ಹಬ್ಬಗಳು ಕನ್ನಡಿಗರಿಗೆ ದಕ್ಕುವುದು ತಪ್ಪಿದೆ. ಆದರೆ ಅಣ್ಣಾಬಾಂಡ್ ಹಾಗೂ ಕಠಾರಿವೀರ ಎರಡೂ ಚಿತ್ರಗಳೂ ಪುನೀತ್ ಹಾಗೂ ಉಪೇಂದ್ರ ಇಬ್ಬರೂ ಅತ್ಯಂತ ಮಹಾತ್ವಾಕಾಂಕ್ಷೆ ಇಟ್ಟಿರುವ ಚಿತ್ರವಾದ್ದರಿಂದ ಬಿಡುಗಡೆ ಬದಲಾದರೆ ಆಶ್ಚರ್ಯವೇನಿಲ್ಲ. ಈ ಮೊದಲೂ ಕೂಡ ಈ ಇಬ್ಬರು ಸ್ಟಾರ್ ಗಳ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗಿದ್ದವು.

ಕೆಲವರ ಪ್ರಕಾರ ಒಂದೇ ದಿನ ಇವೆರಡೂ ಬಿಡುಗಡೆಯಾದರೆ ನಿರ್ಮಾಪಕರಿಗೆ ನಡುಕ ತಪ್ಪಿದ್ದಲ್ಲ. ಈ ಕಾರಣಕ್ಕಾದರೂ ಬಿಡುಗಡೆ ಬದಲಾದರೆ ಆಶ್ಚರ್ಯವಿಲ್ಲ. ಸದ್ಯಕ್ಕೆ ಪುನೀತ್ ಅಣ್ಣಾಬಾಂಡ್ ತಂಡ ಚಿತ್ರೀಕರಣಕ್ಕಾಗಿ ಸ್ಪೇನ್ ದೇಶದಲ್ಲಿದೆ. ಕಠಾರಿವೀರ ಏಪ್ರಿಲ್ ಮೊದಲವಾರ ವಿದೇಶಕ್ಕೆ ಪ್ರಯಾಣ ಬೆಳೆಸಲಿದೆ

ಕನ್ನಡ ಚಿತ್ರಗಳು ಮಾತ್ರ ಆ ದಿನ ಬಿಡುಗಡೆಯಾಗುತ್ತಿಲ್ಲ. ಕಾಲಿವುಡ್ ಬಹುನಿರೀಕ್ಷಿತ ಚಿತ್ರಗಳಾದ ಜೂನಿಯರ್ ಎನ್ ಟಿಆರ್ ಚಿತ್ರ 'ದಮ್ಮು' ಹಾಗೂ ಮಗಧೀರ ಸ್ಟಾರ್ ರಾಮ್ ಚರಣ್ ತೇಜಾರ ಚಿತ್ರ 'ರಚ್ಚ' ಕೂಡ ಅದೇ ದಿನ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ರಾಮ್ ಚರಣ್ ತೇಜಾ ಹಾಗೂ ಜೂ. ಎನ್ ಟಿಆರ್ ಈ ಇಬ್ಬರಿಗೂ ಗುರುಗಳಾದ ರಾಜಮೌಳಿಯ ಬಹುನಿರೀಕ್ಷಿತ ಚಿತ್ರ 'ಈಗ' ಚಿತ್ರವೂ ಅದೇ ದಿನ ಸ್ಪರ್ಧೆ ನೀಡುವ ಸಂಭವವಿದೆ.

ಕನ್ನಡ ಚಿತ್ರಗಳಿಗೆ ಕನ್ನಡಚಿತ್ರಗಳಿಗಿಂತಲೂ ಈ ತೆಲುಗು ಚಿತ್ರಗಳು ಪೈಪೋಟಿ ನೀಡಲಾರವು. ಆದರೂ ಸ್ವಲ್ಪಮಟ್ಟಿಗೆ ಹೊಡೆತ ತಪ್ಪಿದ್ದಲ್ಲ. ತೆಲುಗು ಚಿತ್ರಗಳು ಅದೇ ದಿನ ಕರ್ನಾಟಕದಲ್ಲೂ ಬಿಡುಗಡೆಯಾಗುತ್ತಿವೆ. ಆದರೆ ಅಣ್ಣಾಬಾಂಡ್ ಆಂಧ್ರದಲ್ಲಿ ಬಿಡುಗಡೆ ಆಗುತ್ತಿಲ್ಲ. ಏನೇ ಆಗಲಿ ತೆಲುಗು ಚಿತ್ರಗಳು ಕನ್ನಡಚಿತ್ರಗಳನ್ನು ನುಂಗಿಹಾಕುವ ಕಾಲವಂತೂ ಸದ್ಯಕ್ಕೆ ನಿರ್ಮಾಣವಾಗಿಲ್ಲ.

ಪರೀಕ್ಷೆಗಳು ಮುಗಿದು ವಿದ್ಯಾರ್ಥಿಗಳು ಚಿತ್ರಮಂದಿರದತ್ತ ಬರುವ ಕಾಲ ಏಪ್ರಿಲ್ ಆಗಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳುಗಳು ಸ್ಟಾರ್ ಚಿತ್ರಗಳಿಗೆ ಫೇವರೆಟ್. ಹಾಗಾಗಿಯೇ ಚಿಕ್ಕಪುಟ್ಟ ನಟರ ಚಿತ್ರಗಳು ಅದಕ್ಕೂ ಮೊದಲು ಅಥವಾ ನಂತರ ಬಿಡುಗಡೆ ಕಂಡು ಬಚಾವಾಗಲು ಯತ್ನಿಸುತ್ತವೆ. ಏಪ್ರಿಲ್ ನಲ್ಲಿ ಏನೇನಾಗುತ್ತದೆ ಎಂಬುದನ್ನು ಕಾದು ನೋಡೋಣ

No comments:

Post a Comment