Pages

Thursday, March 15, 2012

ಎಲ್ಲಾ ಓಕೆ ಕೂಲ್ ಡ್ರಿಂಕ್ ಯಾಕೆ? ಉಪ್ಪಿ ಸಂಭ್ರಮ

"ಎಲ್ಲಾ ಓಕೆ ಕೂಲ್ ಡ್ರಿಂಕ್ ಯಾಕೆ?" ಎಂದು ರಿಯಲ್ ಸ್ಟಾರ್ ಉಪೇಂದ್ರ ಡೈಲಾಗ್ ಹೇಳಿ ಹತ್ತು ವರ್ಷಗಳಾಗುತ್ತಿವೆ. ತಾಜಾತನದಿಂದ ಕೂಡಿದ್ದ ಅವರ ಈ ವಾಕ್ಯ ಜನಮನದಲ್ಲಿ ಅಚ್ಚಳಿಯದ ಮುದ್ರೆಯನ್ನು ಒತ್ತಿದೆ. ಇದಕ್ಕೀಗ ದಶಕದ ಸಂಭ್ರಮ. ಹೌದು. ಬಿಯರ್ ಲೋಕದ ನಾಯಕ ಯುಬಿ ಎಕ್ಸ್‌ಪೋರ್ಟ್ ಹಾಗೂ ನಾಯಕ ನಟ ಉಪೇಂದ್ರ ಜಾಹೀರಾತಿನ ಮೂಲಕ ಕೈಜೋಡಿಸಿ ಹತ್ತು ವರ್ಷಗಳೇ ಸಂದಿವೆ. ಆದರೂ ಇನ್ನೂ ಹೊಸತನ ಕಳೆದುಕೊಂಡಿಲ್ಲ.

ದಶಕ ಕಾಲದ ಸುದೀರ್ಘ ಮುಂದುವರಿದ ಯು.ಬಿ.ಎಕ್ಸ್‌ಪೋರ್ಟ್ ಹಾಗೂ ಉಪೇಂದ್ರ (ಬ್ರಾಂಡ್ ಅಂಬಾಸಡರ್) ಸಹಯೋಗದ ಮೆಲುಕು ಕಾರ್ಯಕ್ರಮ ಬುಧವಾರ ಬೆಂಗಳೂರಿನ ತಾಜ್ ವಿವಂಟಾದಲ್ಲಿ ಸಹಜ ಸಂಭ್ರಮದಿಂದ ನಡೆಯಿತು. ಜರನ್ನು ಮಂತ್ರಮುಗ್ಧಗೊಳಿಸಿದ "ಎಲ್ಲಾ ಓಕೆ..." ಘೋಷವಾಕ್ಯ ಇಲ್ಲಿ ಮತ್ತೊಮ್ಮೆ ಮಾರ್ದನಿಸಿತು.

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಯುನೈಟೆಡ್ ಬ್ರ್ಯೂವರೀಸ್‌ನ ಮಾರುಕಟ್ಟೆ ಹಿರಿಯ ಉಪಾಧ್ಯಕ್ಷ ಸಮರ್ ಸಿಂಗ್ ಶೆಖಾವತ್ ಪರಸ್ಪರ ಅಭಿನಂದಿಸಿ ಆ ಕ್ಷಣಗಳನ್ನು ಧನ್ಯಗೊಳಿಸಿದರು. ಕೇಕ್ ಕತ್ತರಿಸಿ ಶುಭಾಶಯ ವಿನಿಮಯ, ದಶಕದ ಅವಧಿಯ ಹಿನ್ನೋಟ, ವಿವಿಧ ಕಾರ್ಯಕ್ರಮಗಳು, ಉಪೇಂದ್ರ ಅವರ ಭಾವಚಿತ್ರದೊಂದಿಗೆ 'ಯುಬಿ ಎಕ್ಸ್‌ಪೋರ್ಟ್' ಬಿಯರ್ ಬಾಟಲಿಗಳು ವಿಶೇಷ ಮೆರುಗು ನೀಡಿದವು.

ಉಪೇಂದ್ರ ಮಾತನಾಡುತ್ತಾ, ನನ್ನ ಸಿನಿಮಾಗಳು ಹೊಸತನ, ಪ್ರತ್ಯೇಕತೆಗೆ ಹೆಸರಾದಂತೆಯೇ, ಅದರಲ್ಲಿನ ಜನಪ್ರಿಯ ಡೈಲಾಗ್ಸ್‌ಗಳಿಗೂ ಮನೆ ಮಾತಾಗಿವೆ. ನಾನು ಇಂತಹ ಜನಪ್ರಿಯ ಸ್ವಯಂ ಸಿದ್ಧ ಡೈಲಾಗ್‌ಗಳಿಂದಾಗಿಯೇ ಜನರ ಮೆಚ್ಚುಗೆ ಗಳಿಸಿದ್ದೇನೆ. ಯುಬಿ ಎಕ್ಸ್‌ಪೋರ್ಟ್ ಉತ್ಪನ್ನಗಳ ಮಾರುಕಟ್ಟೆಯಲ್ಲೂ ನನ್ನ ಎಲ್ಲಾ ಓಕೆ...ಯಾಕೆ ಡೈಲಾಗ್ ಜನಪ್ರಿಯವಾಯಿತು. ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ತಮ್ಮನ್ನು ಜನ ಎಲ್ಲೇ ಕಾಣಲಿ ಈ ಡೈಲಾಗನ್ನೇ ಹೇಳಿ ಗುರುತಿಸುತ್ತಾರೆ. ಇಂತಹ ವಿಶೇಷ ಅನುಭವ ನೀಡಿರುವುದು, ಸಾಧನೆಗಾಗಿ ನಾನು ಯುಬಿ ಎಕ್ಸ್‌ಪೋರ್ಟ್‌ಗೆ ಆಭಾರಿಯಾಗಿದ್ದೇನೆ. ಈಗ 12ನೇ ವರ್ಷ. ಇನ್ನು ಮುಂದೆಯೂ ಇದೇ ರೀತಿ ಯುಬಿ ಎಕ್ಸ್‌ಪೋರ್ಟ್ ಜೊತೆ ಉಪ್ಪಿ ಸಹಯೋಗ ಇರಲಿ ಎಂದರು.

No comments:

Post a Comment